ADVERTISEMENT

ಔರಾದ್: ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ

ಹೊಲಗಳಿಗೆ ನುಗ್ಗಿದ ನೀರು, ರಸ್ತೆ ಮೇಲೆ ಉರುಳಿದ ಮರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:19 IST
Last Updated 23 ಜುಲೈ 2021, 6:19 IST
ಭಾರಿ ಮಳೆಯಿಂದ ಔರಾದ್ ತಾಲ್ಲೂಕಿನ ನಾಗೂರ-ಖಾಶೆಂಪುರ ನಡುವಿನ ಸೇತುವೆಗೆ ಹಾನಿಯಾಗಿದೆ
ಭಾರಿ ಮಳೆಯಿಂದ ಔರಾದ್ ತಾಲ್ಲೂಕಿನ ನಾಗೂರ-ಖಾಶೆಂಪುರ ನಡುವಿನ ಸೇತುವೆಗೆ ಹಾನಿಯಾಗಿದೆ   

ಔರಾದ್: ತಾಲ್ಲೂಕಿನಲ್ಲಿ ‌ಮಳೆ ಆರ್ಭಟ ಮುಂದುರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ನದಿ, ಹಳ್ಳ, ಬಾವಿಗಳು ತುಂಬಿ ಹೊಲಗಳಿಗೆ ನೀರು ನುಗ್ಗಿದೆ. ಇದರಿಂದ ಸಂತಪುರ, ವಡಗಾಂವ್, ಚಿಂತಾಕಿ ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದೆ. ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸಂತಪುರ-ಜಮಗಿ ನಡುವೆ ಬುಧವಾರ ಸಂಜೆ ದೊಡ್ಡ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗುರುವಾರ ಬೆಳಿಗ್ಗೆ ಅದನ್ನು ತೆರವುಗೊಳಿಸಲಾಯಿತು.

ನಾಗೂರ, ಮಸ್ಕಲ್ ಸೇರಿದಂತೆ ಹಲವು ಗ್ರಾಮಗಳ ಹೊಲ ಜಲಾವೃತವಾಗಿವೆ. ಇದರಿಂದಾಗಿ ಸೋಯಾ ಸೇರಿದಂತೆ ಮುಂಗಾರು ಬೆಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ‌‌. ಬೆಳಕುಣಿ ಬಳಿ ಸೇತುವೆ ಮೇಲಿಂದ ನೀರು ಹರಿದು ಈ ಭಾಗದ ಸಂಚಾರ ಸ್ಥಗಿತಗೊಂಡಿದೆ. ತಗ್ಗು ‌ಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ.

ADVERTISEMENT

ಔರಾದ್ ಪಟ್ಟಣದಲ್ಲೂ ಮಳೆ ಅವಾಂತರ ಸೃಷ್ಟಿಸಿದೆ. ಪಟ್ಟಣದ ಹಳೆ ಭಾಗದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಔರಾದ್ ತಾಲ್ಲೂಕು: ದಾಖಲಾದ ಮಳೆ ವಿವರ

ಔರಾದ್: ತಾಲ್ಲೂಕಿನ ಔರಾದ್ ಹೋಬಳಿಯಲ್ಲಿ 303 ಮಿ.ಮೀ, ಚಿಂತಾಕಿ-492, ಸಂತಪುರ-483, ಕಮಲನಗರ-369, ದಾಬಕಾ-505, ಠಾಣಾಕುಶ ನೂರ- 503 ಮಳೆ ಆಗಿದೆ. ಜನವರಿ 1ರಿಂದ ಜುಲೈ 21ರ ವರೆಗೆ ತಾಲ್ಲೂಕಿನ ಎಲ್ಲೆಡೆ ವಾಡಿಕೆಗಿಂತ ಜಾಸ್ತಿ ಮಳೆ ಆಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.