ADVERTISEMENT

ಲಾಕ್‌ಡೌನ್ ಬಿಸಿ | ಖರೀದಿಸುವವರು ಬಾರದೆ ಜಮೀನಿನಲ್ಲೇ ಹಾಳಾಗುತ್ತಿರುವ ಕಲ್ಲಂಗಡಿ

ವೀರೇಶ.ಎನ್.ಮಠಪತಿ
Published 21 ಮೇ 2020, 6:08 IST
Last Updated 21 ಮೇ 2020, 6:08 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ರೈತ ಸುಬ್ಬಣ್ಣ ದರಗೊಂಡ್ ತೋಟದಲ್ಲಿ ಹಾಳಾಗಿರುವ ಕಲ್ಲಂಗಡಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿರುವುದು
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ರೈತ ಸುಬ್ಬಣ್ಣ ದರಗೊಂಡ್ ತೋಟದಲ್ಲಿ ಹಾಳಾಗಿರುವ ಕಲ್ಲಂಗಡಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿರುವುದು   

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ರೈತ ಸುಬ್ಬಣ್ಣ ದರಗೊಂಡ್ ಅವರ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು, ಲಾಕ್‌ಡೌನ್‌ ಪರಿಣಾಮದಿಂದ ಖರೀದಿಸುವವರು ಬಾರದೇ ತೋಟದಲ್ಲಿಯೇ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗಿದೆ.

‘ಎರಡು ಎಕರೆ ಹೊಲದಲ್ಲಿ ₹ 1 ಲಕ್ಷ ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆ ಕಟಾವಿಗೆ ಬಂದಿದೆ. ಆದರೆ, ಲಾಕ್‌ಡೌನ್‌ ಪರಿಣಾಮದಿಂದ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಬೇರೆ ಪಟ್ಟಣ, ನಗರಗಳಿಗೆ ಟೆಂಪೋದಲ್ಲಿ ಕೊಂಡೊಯ್ಯಲು ಪ್ರಯತ್ನ ಪಟ್ಟು ವಿಫಲವಾಗಿದ್ದೇನೆ. ಅಲ್ಲಿಯ ಮಾರುಕಟ್ಟೆಯಲ್ಲೂ ಖರೀದಿಸಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಟೆಂಪೋ ಬಾಡಿಗೆ ಕೊಡಲೂ ಹಣವಿಲ್ಲವಾಗಿದೆ‘ ಎಂದು ಸುಬ್ಬಣ್ಣ ಅಳಲು ತೋಡಿಕೊಂಡರು.

‘ಹಣ್ಣುಗಳು ತೋಟದಲ್ಲಿಯೇ ಹಳದಿ ಬಣ್ಣಕ್ಕೆ ತಿರುಗಿ ಇದ್ದಲ್ಲಿಯೇ ಕೊಳೆತು ಹೋಗುತ್ತಿವೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಬಂದು ಕೈ ತುಂಬಾ ಹಣ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ನನ್ನಂತಹ ಇತರ ರೈತರಿಗೆ ಇದೀಗ ಕೊರೊನಾ ವೈರಸ್‌ನಿಂದಾಗಿ ನಷ್ಟ ಅನುಭವಿಸುವಂತಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

'ಈ ಸಮಸ್ಯೆಯನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈಚೆಗೆ ಅಧಿಕಾರಿಗಳು ಕಾಟಾಚಾರಕ್ಕಾಗಿ ತೋಟಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಹಣ್ಣು ಖರೀದಿಗೆ ಸರ್ಕಾರ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು‘ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.