ADVERTISEMENT

ಲಾಕ್‌ಡೌನ್‌: ತರಕಾರಿ ಬೆಳೆದ ರೈತರಿಗೆ ನಷ್ಟ, ಸರ್ಕಾರದಿಂದ ಪರಿಹಾರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 2:25 IST
Last Updated 11 ಜೂನ್ 2021, 2:25 IST
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ವಿಠಲ್ ಅವರು ಹೊಲದಲ್ಲಿ ಹೀರೇಕಾಯಿ ಬೆಳೆದಿರುವುದು
ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ವಿಠಲ್ ಅವರು ಹೊಲದಲ್ಲಿ ಹೀರೇಕಾಯಿ ಬೆಳೆದಿರುವುದು   

ಹುಮನಾಬಾದ್: ಕೊರೊನಾ ಲಾಕ್‌ಡೌನ್‌ ಪರಿಣಾಮ ಕಷ್ಟಪಟ್ಟು ಬೆಳೆದ ತರಕಾರಿ ಸೂಕ್ತ ಬೆಲೆಗೆ ಮಾರಾಟವಾಗದೇ ಇರುವ ಕಾರಣ ತಾಲ್ಲೂಕಿನ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

‘ಈಗಾಗಲೇ ಮುಂಗಾರು ಹಂಗಾಮಿನ ಬಿತ್ತನೆಯ ಸಿದ್ಧತೆಯಲ್ಲಿ ಅಷ್ಟೊಂದು ಉತ್ಸಾಹ ಸಹ ಕಾಣುತ್ತಿಲ್ಲ. ಕಳೆದ ವರ್ಷ ಕೊರೊನಾ ಸೋಂಕು ನಮ್ಮನ್ನು ಇಷ್ಟೊಂದು ಕಾಡಲಿಲ್ಲ. ಆದರೆ ಅದರಿಂದ ಸುಧಾರಿಸಿಕೊಳ್ಳವುದರಲ್ಲಿ ಮತ್ತೆ ಕೋವಿಡ್ ಎರಡನೇ ಅಲೆ ಪ್ರವಾಹದಂತೆ ಬಂದು ನಮ್ಮನ್ನು ಹೈರಾಣು ಮಾಡಿದೆ’ ಎಂದು ಯುವ ರೈತ ಶಶಿಕುಮಾರ ಮಾಶೆಟ್ಟಿ ಹೇಳಿದರು.

‘ಸತತವಾಗಿ ಎರಡು ವರ್ಷಗಳಿಂದ ವಿಪರೀತ ಈ ಸೋಂಕು ಕಾಡುತ್ತಿದೆ. ಪಟ್ಟಣಗಳ ಕಾರ್ಖಾನೆಗಳಲ್ಲಿ ನೆಮ್ಮದಿಯಿಂದ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಇದರಿಂದಾಗಿ ಎಲ್ಲ ಕೆಲಸಗಳನ್ನು ಬಿಟ್ಟು ಗ್ರಾಮಗಳಂತ ಬಂದು ಹೊಲಗಳಲ್ಲಿ ತರಕಾರಿಗಳನ್ನು ಬೆಳೆಸಿದರೆ ಅದಕ್ಕೆ ಸೂಕ್ತವಾದ ಬೆಲೆ ಸಿಗದ ಕಾರಣ ನಷ್ಟ ಅನುಭವಿಸಬೇಕಾಗಿದೆ’ ಎಂದು ಹುಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ನಗರ ಗ್ರಾಮಸ್ಥ ಅಭಿಷೇಕ್ ತಿಳಿಸಿದರು.

ADVERTISEMENT

‘ಮೂರು ಎಕರೆ ಹೊಲದಲ್ಲಿ ಟೊಮೊಟೊ, ಬದನೆಕಾಯಿ, ಹೀರೇಕಾಯಿ, ಕುಂಬಳಕಾಯಿ ಸೇರಿದಂತೆ ವಿವಿಧ ರೀತಿಯ ಮಿಶ್ರ ಬೆಳೆಗಳನ್ನು ಬೆಳೆಯಲಾಗಿದೆ. ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಅರ್ಧ ಬೆಲೆಗೆ ಕೇಳುತ್ತಿದ್ದಾರೆ. ಸುಮಾರು ₹2ರಿಂದ ₹3 ಲಕ್ಷ ಖರ್ಚು ಮಾಡಿ ಈ ತರಕಾರಿಗಳನ್ನು ಬೆಳೆಸಲಾಗಿದೆ. ಆದರೆ ಇದಕ್ಕೆ ಖರ್ಚು ಮಾಡಿದ ಹಣ ಸಹ ವಾಪಾಸು ಬರುತ್ತದೆ ಎಂಬ ನಂಬಿಕೆ ಸಹ ನಮಗಿಲ್ಲ’ ಎಂದು ರೈತ ವಿಠಲ್ ಮೂಲಗಿ ಅವರು ತಿಳಿಸಿದರು.

‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅನೇಕ ರೈತರು ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ನಷ್ಟ ಅನುಭವಿಸಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ಭೇಟಿ ನೀಡಿ ಅವರ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಕೊಡಿಸುವಂತಹ ಕೆಲಸ ಮಾಡಬೇಕು’ ಎಂದು ಮಾಜಿ ಸೈನಿಕ ಕಲ್ಲಪ್ಪ ಮಾಶೆಟ್ಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.