ADVERTISEMENT

ಬೀದರ್‌ನಲ್ಲಿ ‘ರಕ್ತ ಚಂದಿರ’ ವೇಳೆ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 7:37 IST
Last Updated 4 ಮಾರ್ಚ್ 2026, 7:37 IST
ಚಿತ್ರ ಶೀರ್ಷಿಕೆ: ಬೀದರ್‌ನ ಅಂಬೇಡ್ಕರ್ ವೃತ್ತದ ಬಳಿ ಚಂದ್ರಗ್ರಹಣ ವೇಳೆ ಬಾಳೆಹಣ್ಣು ತಿನ್ನುವ ಮೂಲಕ ಮೌಢ್ಯ ವಿರೋಧಿ ಜಾಗೃತಿ ಮೂಡಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು.
ಚಿತ್ರ ಶೀರ್ಷಿಕೆ: ಬೀದರ್‌ನ ಅಂಬೇಡ್ಕರ್ ವೃತ್ತದ ಬಳಿ ಚಂದ್ರಗ್ರಹಣ ವೇಳೆ ಬಾಳೆಹಣ್ಣು ತಿನ್ನುವ ಮೂಲಕ ಮೌಢ್ಯ ವಿರೋಧಿ ಜಾಗೃತಿ ಮೂಡಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು.   

ಬೀದರ್: ಆಕಾಶದಲ್ಲಿ ಖಗೋಳ ವಿಸ್ಮಯವಾಗಿ ಚಂದ್ರಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳರೇಖೆಯಲ್ಲಿ ಬರುವಾಗ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವುದರಿಂದ ಚಂದ್ರಗ್ರಹಣ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರ ಕೆಂಪಾಗಿ ಕಾಣಿಸಿಕೊಳ್ಳುವುದರಿಂದ ಅದನ್ನು ‘ರಕ್ತ ಚಂದಿರ’ ಎಂದೂ ಕರೆಯಲಾಗುತ್ತದೆ.

ಸೂರ್ಯನ ಬೆಳಕು ಭೂಮಿಯ ವಾಯುಮಂಡಲವನ್ನು ದಾಟಿ ಚಂದ್ರನ ಮೇಲೆ ಬೀಳುವಾಗ ಕೆಂಪು ಬಣ್ಣದ ತರಂಗದೈರ್ಘ್ಯ ಹೆಚ್ಚು ಇರುವುದರಿಂದ ಕೆಂಪು ಕಿರಣಗಳು ಮಾತ್ರ ಚಂದ್ರನ ಮೇಲ್ಮೈಗೆ ತಲುಪುತ್ತವೆ. ಇದರಿಂದ ಚಂದ್ರ ಕೆಂಪಾಗಿ ಕಾಣಿಸುತ್ತದೆ ಎಂದು ತಜ್ಞರು ವಿವರಿಸಿದ್ದಾರೆ. ಸುಮಾರು 4 ಲಕ್ಷ ಕಿಲೋಮೀಟರ್ ದೂರದಲ್ಲಿ ನಡೆಯುವ ಈ ಖಗೋಳ ಘಟನೆಗೆ ಭೂಮಿಯ ಮೇಲಿನ ದೈನಂದಿನ ಕ್ರಿಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಚಂದ್ರಗ್ರಹಣದ ಬಗ್ಗೆ ಸಮಾಜದಲ್ಲಿ ಇರುವ ಮೌಢ್ಯಗಳನ್ನು ನಿವಾರಿಸಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಭಾರತೀಯ ಸಂವಿಧಾನದ ವಿಧಿ 51(ಎ)ಯ ಆಶಯದಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಭಾರತ ಜ್ಞಾನ ವಿಜ್ಞಾನ ಸಮಿತಿ, ವೈಜ್ಞಾನಿಕ ಸಂಶೋಧನಾ ಸಮಿತಿ, ಬುದ್ಧ ಬಸವ ಅಂಬೇಡ್ಕರ್ ಯುವ ಸಂಘ, ಬಸವ ಕೇಂದ್ರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಮಾದರ ಚನ್ನಯ್ಯ ಸಹಕಾರ ಸಂಘ, ಪ್ರಭುರಾವ ಕಂಬಳೆವಾಲೆ ಕನ್ನಡ ಸೇವಾ ಸಂಘ ಹಾಗೂ ಲಿಂಗಾಯತ ಸಮನ್ವಯ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂಬೇಡ್ಕರ್ ವೃತ್ತದ ಬಳಿ ಚಂದ್ರಗ್ರಹಣದ ಸಮಯದಲ್ಲಿ ಬಾಳೆಹಣ್ಣು ತಿನ್ನುವ ಮೂಲಕ ಮೌಢ್ಯತೆಯ ಭೀತಿಯನ್ನು ತೊಲಗಿಸುವ ಸಂಕಲ್ಪ ಕೈಗೊಳ್ಳಲಾಯಿತು. “ತೊಲಗಲಿ ತೊಲಗಲಿ ಮೌಢ್ಯತೆ ತೊಲಗಲಿ” ಎಂಬ ಘೋಷಣೆಗಳು ಮೊಳಗಿದವು.

ಕಾರ್ಯಕ್ರಮದಲ್ಲಿ ಎಂ.ಎಸ್. ಮನೋಹರ (ರಾಜ್ಯ ಸಮಿತಿ ಸದಸ್ಯರು), ಕಲಾಲ್ ದೇವಿಪ್ರಸಾದ (ಜಿಲ್ಲಾ ಅಧ್ಯಕ್ಷರು), ಶ್ರೀಕಾಂತ ಸ್ವಾಮಿ, ಶರಣಪ್ಪ ಮಿಠಾರೆ, ಡಾ. ಕಾಶಿನಾಥ ಚೆಲ್ವಾ, ವಿಜಯಕುಮಾರ ಸೋನಾರೆ, ಮಹೇಶ ಗೋರನಾಳಕರ್, ಮಾರುತಿರಾವ ವಾಘಮಾರೆ, ರಾಜಕುಮಾರ ಕರುಣಾಸಾಗರ, ಜಗದೀಶ ಬಿರಾದಾರ, ಧರ್ಮಪ್ರಕಾಶ ಆರ್ಯ, ಶಾಂತಕುಮಾರ ಉದಯಗಿರೆ, ಉಮೇಶ ಜಾಬಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.