ADVERTISEMENT

‘ಮಹಾಲಕ್ಷ್ಮಿ ದೇವಿ ಜಾತ್ರೆ: ತಹಶೀಲ್ದಾರ್ ನೇತೃತ್ವ ವಹಿಸಲಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:31 IST
Last Updated 17 ಡಿಸೆಂಬರ್ 2025, 7:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹುಲಸೂರ: ‘ಭಾಲ್ಕಿ ತಾಲ್ಲೂಕಿನ ಹಲಸಿ ತುಗಾಂವ ಗ್ರಾಮದಲ್ಲಿ ಜನವರಿ 14ರಿಂದ 16ರವರೆಗೆ ನಡೆಯಲಿರುವ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರದಿಂದ ನಿಯೋಜಿತ ತಹಶೀ ಲ್ದಾರ್ ಅವರೇ ನಿಭಾಯಿಸಬೇಕು’ ಎಂದು ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಜಾತ್ರಾ ಮಹೋತ್ಸವವನ್ನು ಹಿಂದೆ ಒಂದು ಟ್ರಸ್ಟ್ ಮೂಲಕ ನಡೆಸಲಾಗುತ್ತಿತ್ತು. ಆದರೆ, ಗ್ರಾಮದಲ್ಲಿ ಟ್ರಸ್ಟ್‌ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಮತ್ತೊಂದು ಟ್ರಸ್ಟ್ ಸ್ಥಾಪನೆಯಾದ ಕಾರಣ ಎರಡು ಟ್ರಸ್ಟ್‌ಗಳ ನಡುವೆ ತೀವ್ರ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಮೊರೆ ಹೋಗಿದ್ದರು.

ADVERTISEMENT

ವಿವಾದದ ಹಿನ್ನೆಲೆ 2023ರಲ್ಲಿ ನಡೆದ ಜಾತ್ರಾ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ತಹಶೀಲ್ದಾರ್‌ಗೆ ವಹಿಸಲಾಗಿತ್ತು. ಆ ಸಂದರ್ಭದಲ್ಲಿ ಭಕ್ತಾದಿಗಳಿಂದ ಹುಂಡಿಗೆ ಸುಮಾರು ₹25 ಲಕ್ಷ ನಗದು, 300 ಗ್ರಾಂ ಬಂಗಾರ ಹಾಗೂ 4–5 ಕೆ.ಜಿ ಬೆಳ್ಳಿ ದೇಣಿಗೆ ಸಂಗ್ರಹವಾಗಿತ್ತು. ಈ ದೇಣಿಗೆಯನ್ನು ತಹಶೀಲ್ದಾರ್‌ರರ ಜವಾಬ್ದಾರಿಯಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದರು.

‘2026ರಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದ ಹಣಕಾಸಿನ ಜವಾಬ್ದಾರಿಯನ್ನು ಗ್ರಾಮದಲ್ಲಿರುವ ಟ್ರಸ್ಟ್‌ಗೆ ವಹಿಸಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಇದುವರೆಗೂ 2023ರ ಜಾತ್ರೆಯ ಆದಾಯ–ವೆಚ್ಚದ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಇದರಿಂದ ಮತ್ತೆ ಗ್ರಾಮದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ’ ಎಂದು ಹೇಳಿದರು.

ಹೀಗಾಗಿ 2026ರ ಜಾತ್ರಾ ಮಹೋತ್ಸವದ ಜವಾಬ್ದಾರಿಯನ್ನು ಯಾವುದೇ ಟ್ರಸ್ಟ್‌ಗೆ ನೀಡದೆ, ಮೊದಲು 2023ರ ಜಾತ್ರೆಗೆ ಸಂಬಂಧಿಸಿದ ಸಂಪೂರ್ಣ ಹಣಕಾಸಿನ ಲೆಕ್ಕಪತ್ರವನ್ನು ಗ್ರಾಮಸ್ಥರ ಮುಂದೆ ಮಂಡಿಸಬೇಕು. ನಂತರ ಮುಂದುವರಿದು ಜಾತ್ರಾ ಮಹೋತ್ಸವದ ಜವಾಬ್ದಾರಿಯನ್ನು ತಹಶೀಲ್ದಾರ್‌ರವರಿಗೇ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮದ ಪ್ರಮುಖರಾದ ಚಂದ್ರಶೇಖರ್ ಪಾಟೀಲ, ತಾನಾಜಿ ಗಜಾರೆ, ದಗ್ದು ಸೂರ್ಯವಂಶಿ, ಬಾಳಾಸಾಹೇಬ್ ಗಜಾರೆ, ಬಾಬುರಾವ್ ಮಿರಕಲೆ, ಅತುಲ್ ಪಿಚಾರೆ, ವಿಜಯ್ ಪಿಚಾರೆ, ವಿನಾಯಕ ಮೋರೆ, ಗಣೇಶ ಘೋರ್ವಾಡೆ, ನೇತಾಜಿ ಗಜಾರೆ, ಗುಂಡಾಜಿ ಗಜಾರೆ, ಮಕ್ಬುಲ್ ಪಟೇಲ್, ಅಶೋಕ್ ಮಸ್ಕೆ, ಸಂಭಾಜಿ ಕಲ್ಬೋನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.