ಔರಾದ್: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ಬಿಸಿ ಗಡಿ ಭಾಗದ ಪ್ರಯಾಣಿಕರಿಗೂ ತಟ್ಟಿದೆ.
ಔರಾದ್ ತಾಲ್ಲೂಕು ಎರಡು ರಾಜ್ಯಗಳ ಗಡಿ ಭಾಗದಲ್ಲಿರುವ ಕಾರಣ ಇಲ್ಲಿ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಬಸ್‌ಗಳ ಓಡಾಟ ಸಾಮಾನ್ಯವಾಗಿರುತ್ತದೆ. ಆದರೆ, ಮುಷ್ಕರದಿಂದಾಗಿ ಇಂದು ಬೆಳಿಗ್ಗೆಯಿಂದ ಆ ರಾಜ್ಯಗಳ ಬಸ್‌ಗಳೂ ಬಂದಿಲ್ಲ. ಹೀಗಾಗಿ ಪಕ್ಕದ ರಾಜ್ಯಗಳ ಗ್ರಾಮೀಣ ಭಾಗದ ಪ್ರಯಾಣಿಕರು ಪರದಾಡಬೇಕಾಯಿತು.
ಮೊದಲೇ ಮುಷ್ಕರ ಘೋಷಣೆಯಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಬಸ್ ಓಡಿಸುವುದು ಬೇಡ ಎಂದು ಆ ರಾಜ್ಯದ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ತಿಳಿಸಿದ ಕಾರಣ ಅವರು ಬಸ್‌ಗಳನ್ನು ಓಡಿಸಿಲ್ಲ ಎಂದು ಇಲ್ಲಿಯ ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಸರ್ಕಾರಿ ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೂ ಕಡಿಮೆ ಇತ್ತು. ನಿತ್ಯ ಸರ್ಕಾರಿ ಕಚೇರಿಗಳಿಗೆ ಹೋಗುವ ನೌಕರರು ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಮಹಿಳೆಯರು ಸೇರಿದಂತೆ ಅನೇಕ ಜನರು ಬಸ್ ನಿಲ್ದಾಣದ ಕಡೆ ಸುಳಿಯಲಿಲ್ಲ. ಹೀಗಾಗಿ ಇಡೀ ಬಸ್ ನಿಲ್ದಾಣ ಭಣ ಭಣ ಎನ್ನುತ್ತಿತ್ತು.
ಇದು ಅನಿರ್ದಿಷ್ಟಾವಧಿ ಮುಷ್ಕರ ಆಗಿರುವುದರಿಂದ ಯಾವಾಗ ಮುಗಿಯುತ್ತದೆ ಎಂದು ಹೇಳಲು ಬರುವುದಿಲ್ಲ. ನಮ್ಮ ಘಟಕದ ಎಲ್ಲ 89 ಬಸ್‌ಗಳು ಇಂದು ರಸ್ತೆಗೆ ಇಳಿದಿಲ್ಲ ಎಂದು ಘಟಕ ವ್ಯವಸ್ಥಾಪಕ ರಾಜಶೇಖರ ತಾಳಘಾಟಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.