ಜನವಾಡ (ಬೀದರ್ ತಾಲ್ಲೂಕು): ಮಾವಿಗೆ ಯೋಗ್ಯ ಬೆಲೆ ದೊರಕಿಸಿಕೊಡಲು ರೈತರ ಹೆಸರಲ್ಲೇ ಮಾವು ಬ್ರ್ಯಾಂಡ್ ಸೃಷ್ಟಿಸಲು ಯೋಜಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಎನ್.ಎಂ.ಹೇಳಿದರು.
ಇಲ್ಲಿಗೆ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಮಾವು ಬೆಳೆ ಕುರಿತ ಜಿಲ್ಲಾಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಬ್ರ್ಯಾಂಡ್ ಹಾಗೂ ಮಾರುಕಟ್ಟೆ ಸೃಷ್ಟಿಗೆ ಕೃಷಿ ವಿಜ್ಞಾನ ಕೇಂದ್ರ ಅಗತ್ಯ ತಾಂತ್ರಿಕ ನೆರವು ನೀಡಲಿದೆ. ಸ್ವಂತ ಬ್ರ್ಯಾಂಡ್‍ನಿಂದ ಮಾವು ಉತ್ಪಾದಕರಿಗೆ ಅಧಿಕ ಲಾಭ ಸಿಗಲಿದೆ ಎಂದು ತಿಳಿಸಿದರು.
ಮಾವು ಬೆಳೆಗೆ ಜಿಲ್ಲೆಯ ವಾತಾವರಣ ಸೂಕ್ತವಾಗಿದೆ. ಜಿಲ್ಲೆಯಲ್ಲಿ ಅನೇಕ ರೈತರು ದಶಹರಿ, ಕೇಸರ್, ಮಲ್ಲಿಕಾ, ಬೆನಿಶಾನ್, ಆಮ್ರಪಾಲಿ, ಹಿಮಾಯತ್, ಖಾದರ್ ಮೊದಲಾದ ತಳಿಯ ಮಾವುಗಳನ್ನು ಬೆಳೆಯುತ್ತಿದ್ದಾರೆ ಎಂದು ಹೇಳಿದರು.
ಸದ್ಯ ಮಾವು ಹೂವಾಡುವ ಹಂತದಲ್ಲಿ ಇದೆ. ಹೀಗಾಗಿ ಬೆಳೆಗಾರರಿಗೆ ಮಾವು ಸ್ಪೆಷಲ್ ಬಳಕೆ, ಪೋಷಕಾಂಶ, ಕೀಟ, ರೋಗಗಳ ನಿರ್ವಹಣೆ ಕುರಿತು ಮಾಹಿತಿ ಒದಗಿಸಲು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತರು ಆಧುನಿಕ ತಾಂತ್ರಿಕತೆ ಬಳಸಿದ್ದಲ್ಲಿ ಮಾವು ಬೆಳೆಯಲ್ಲಿ ಅಧಿಕ ಲಾಭ ಗಳಿಸಬಹುದು ಎಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರಬರ ಹೇಳಿದರು.
ಒಣ ಬೇಸಾಯ ಹಾಗೂ ನೀರಾವರಿ ಸೌಲಭ್ಯ ಹೊಂದಿದ ರೈತರೂ ಮಾವು ಬೆಳೆಯಬಹುದು ಎಂದು ತಿಳಿಸಿದರು.
ವೈವಿಧ್ಯಮಯ ಬೆಳೆ ಬೆಳೆಯುವುದರಿಂದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸಲಿದೆ ಎಂದು ಹೇಳಿದರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಸ್.ಎ.ಕುಲಕರ್ಣಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುನೀಲಕುಮಾರ ಗಂಗಸಿರಿ, ತೋಟಗಾರಿಕೆ ಕಾಲೇಜಿನ ಪ್ರಾಧ್ಯಾಪಕ ಪ್ರವೀಣಕುಮಾರ ಜೋಗಳೆಕರ್, ಸಹ ಪ್ರಾಧ್ಯಾಪಕ ಶ್ರೀನಿವಾಸ ಎನ್. ಮಾತನಾಡಿದರು.
ಮಲ್ಲಿಕಾರ್ಜುನ ನಿಂಗದಳ್ಳಿ, ಜ್ಞಾನದೇವ ಬುಳ್ಳಾ, ಧನರಾಜ ವಿ ಇದ್ದರು.
ಕೃಷಿ ವಿಜ್ಞಾನಿಗಳಿಂದ ಮಾವು ಉತ್ಪಾದನೆ ತಾಂತ್ರಿಕತೆ ಮಾಹಿತಿ ಮಾವು ಉತ್ಪಾದನೆ ಪರಿಕರಗಳ ಪ್ರದರ್ಶನ ಜಿಲ್ಲೆಯ 78 ಮಾವು ಬೆಳೆಗಾರರು ಭಾಗಿ
ಮಾವು ಮಾಗಿಸುವ ತಾಂತ್ರಿಕತೆ ಪ್ರಾತ್ಯಕ್ಷಿಕೆ ವಿಚಾರ ಸಂಕಿರಣದಲ್ಲಿ ರೈತರಿಗೆ ಮಾವು ಮಾಗಿಸುವ ತಾಂತ್ರಿಕತೆಯ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಮಾವು ಉತ್ಪಾದನೆಗೆ ಬೇಕಾಗುವ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಣ್ಣು ಕೀಳುವ ಸಾಧನ ಕೀಟ ನಿರ್ವಹಣೆ ತಂತ್ರಜ್ಞಾನ ಕೀಟ ನಾಶಕ ಔಷಧಿ ಸಿಂಪರಣಾ ಯಂತ್ರ ಬೇವಿನ ಸಾಬೂನು ಮೊದಲಾದವು ಪ್ರದರ್ಶನದಲ್ಲಿ ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.