ADVERTISEMENT

ಅಂಬೇಡ್ಕರ್ ಹೋರಾಟದ ಸ್ಮರಣೆ; ಸಾಂಕೇತಿಕ ಮನುಸ್ಮೃತಿ ದಹನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 10:28 IST
Last Updated 25 ಡಿಸೆಂಬರ್ 2025, 10:28 IST
   

ಬೀದರ್: 1927ರ ಡಿಸೆಂಬರ್ 25ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿ ದಹಿಸಿದ ದಿನದ ಸ್ಮರಣಾರ್ಥ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಬಾಬಾ ಸಾಹೇಬರ ವೃತ್ತದಲ್ಲಿ ಮನುಸ್ಮೃತಿ ದಹನ ಮಾಡಿದರು.‌

ಬಳಿಕ ಮಾತನಾಡಿದ ಮುಖಂಡರು, ಅಂಬೇಡ್ಕರ್‌ ಅವರು ಮನುಸ್ಮೃತಿ ದಹಿಸಿದ ಐತಿಹಾಸಿಕ ಘಟನೆಗೆ ಇಂದಿಗೆ 98 ವರ್ಷಗಳು ಪೂರ್ಣಗೊಂಡಿವೆ. ಶ್ರೇಣಿಕೃತ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಲಿಂಗಭೇದ, ಮಹಿಳೆಯರ ಮೇಲಿನ ದಬ್ಬಾಳಿಕೆ, ಸತಿ ಸಹಗಮನ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಸೇರಿದಂತೆ ಅನಿಷ್ಠ ಸಾಮಾಜಿಕ ಪದ್ಧತಿಗಳ ಮೂಲವಾಗಿದ್ದ ಮನುಸ್ಮೃತಿಯನ್ನು ದಹಿಸಿ ಸಮಾನತೆ, ಸ್ವಾತಂತ್ರ‍್ಯ ಹಾಗೂ ಭಾತೃತ್ವದ ಹೋರಾಟಕ್ಕೆ ದಿಕ್ಕು ತೋರಿಸಿದ್ದರು ಎಂದರು.

ಸ್ವಾತಂತ್ರ‍್ಯ ಭಾರತಕ್ಕೆ ಸಮಾನತೆಯ ಆಶಯದ ಸಂವಿಧಾನವನ್ನು ಕೊಟ್ಟಿರುವ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಕೊಡುಗೆ ಅಮೂಲ್ಯವಾದುದು. ಸಂವಿಧಾನ ಅಂಗೀಕಾರದ ಸಂದರ್ಭದಲ್ಲಿಯೇ ಕೆಲವು ಸಂಘಟನೆಗಳು ಸಂವಿಧಾನದ ವಿರುದ್ಧ ಅಸಹನೆಯನ್ನು ವ್ಯಕ್ತಪಡಿಸಿದ್ದವು. ಇಂದಿಗೂ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸವಾಲುಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ADVERTISEMENT

ದಸಂಸ ಜಿಲ್ಲಾ ಸಂಚಾಲಕ ತುಕಾರಾಮ ಲಾಡಕರ, ಪ್ರಮುಖರಾದ ಸಂದೀಪ ಕಾಂಟೆ, ಪ್ರದೀಪ್‌ ನಾಟೇಕರ್, ಶಿವಕುಮಾರ ನೀಲಕಟ್ಟಿ, ರವೀಂದ್ರ ಗೌಂಡೆ, ಸುನೀಲ ಸಂಗಮ, ಶಿವರಾಜ ಲಾಡಕರ, ರಾಜಕುಮಾರ ಚಂದನ, ವಿಠಲ ಲಾಡೆ, ಮಲ್ಲಿಕಾರ್ಜುನ ಭಂಡಾರಿ, ಶ್ರೀಪತರಾವ್‌ ದೀನೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.