ADVERTISEMENT

ಬಿದರಿ ಕಲಾಕೃತಿಗಳಿಗೆ ಮಾರುಕಟ್ಟೆ ಸೌಲಭ್ಯ: ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 13:51 IST
Last Updated 20 ಮಾರ್ಚ್ 2020, 13:51 IST
ವಿಜಯಸಿಂಗ್‌
ವಿಜಯಸಿಂಗ್‌   

ಬೀದರ್: ಬಿದರಿ ಕಲಾಕೃತಿಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಭೌಗೋಳಿಕ ಗುರುತಿನ ನೋಂದಣಿ ಹೊಂದಿರುವ ಬಿದರಿ ಕಲಾಕೃತಿಗಳನ್ನು ಕೆಂಪೇಗೌಡ ಅಂತರರರಾಷ್ಟ್ರೀಯವಿಮಾನ ನಿಲ್ದಾಣ ಹಾಗೂ ಆನ್‍ಲೈನ್‍ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ರಾಜ್ಯ ಹಾಗೂ ರಾಷ್ಟ್ರಮಟ್ಟದ ವಸ್ತು ಪ್ರದರ್ಶನಗಳಲ್ಲಿ ಬಿದರಿ ಕಲಾವಿದರಿಗೆ ತಮ್ಮ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ 300 ಕುಟುಂಬಗಳು ಬಿದರಿ ಕಲೆಯಲ್ಲಿ ತೊಡಗಿಸಿಕೊಂಡಿವೆ. ಇದರಲ್ಲಿ 108 ಕುಶಲಕರ್ಮಿಗಳು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ಹೇಳಿದ್ದಾರೆ.

ನಿಗಮವು ಕಲಾವಿದರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ನೋಂದಾಯಿತ ಬಿದರಿ ಕಲಾವಿದರಿಗೆ ಶೇ 50 ರಷ್ಟು ರಿಯಾಯಿತಿ ದರದಲ್ಲಿ ಬೆಳ್ಳಿ ಮತ್ತು ಸತು ವಿತರಿಸಲಾಗುತ್ತಿದೆ. ಮಾರಾಟದ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಬಿದರಿ ಕರಕುಶಲ ಕರ್ಮಿಗಳಿಗೆ ಆರೋಗ್ಯ ತಪಾಸಣೆ, ಕಣ್ಣು ಪರೀಕ್ಷೆ ಮಾಡಿಸಿ, ಅವಶ್ಯಕತೆ ಇರುವವರಿಗೆ ಕನ್ನಡಕ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿದರಿ ವಸ್ತುಗಳನ್ನು ಸಿದ್ಧಪಡಿಸಲು ಸುಧಾರಿತ ಉಪಕರಣಗಳನ್ನು ನೀಡಲಾಗಿದೆ. ಡಚ್ ಅಸಿಸ್ಟೆಡ್ ಪ್ರೋಗ್ರಾಂ ಅಡಿಯಲ್ಲಿ, ವಿಶ್ವ ಯೋಜನೆಯಡಿ ಮತ್ತು ಅಭಿವೃದ್ಧಿ ಆಯುಕ್ತರ ವತಿಯಿಂದ 193 ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿ ಕರಕುಶಲಕರ್ಮಿಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.