
ಭಾಲ್ಕಿ: ಬಾಬಾರಾವ್ ಹೊನ್ನಾಳಿಕರ್ ಶಿಂದೆ ಅವರು ವಕೀಲರಾಗಿ, ಸ್ವತಂತ್ರ ಹೋರಾಟಗಾರರಾಗಿ, ನಿಜಾಮ ಸರ್ಕಾರದ ವಿರುದ್ಧ ಹೋರಾಟಗೈದು ಅವರು ಸಲ್ಲಿಸಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಶಿವಾಜಿ ಕಾಲೇಜಿನಲ್ಲಿ ನಡೆದ ಕಿಸಾನ ಶಿಕ್ಷಣ ಪ್ರಸಾರಕ ಮಂಡಳದ ಸುವರ್ಣ ಮಹೋತ್ಸವ ಕಾರ್ಯಕ್ರಮ, ಬಾಬಾರಾವ್ ಹೊನ್ನಾಳ್ಳಿಕರ್ ಅವರ ಮೂರ್ತಿ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಸೌಲಭ್ಯವಿಲ್ಲದ ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಬಾಬಾರಾವ್ ಹೊನ್ನಾಳಿಕರ್ ಮಾಡಿದ ಶೈಕ್ಷಣಿಕ ಸೇವೆ ಅನುಪಮವಾಗಿದೆ. ಕಿಸಾನ ಶಿಕ್ಷಣ ಪ್ರಸಾರಕ ಮಂಡಳದ ಅಭಿವೃದ್ಧಿಗಾಗಿ ನಾನು ಎಲ್ಲ ನೆರವು ನೀಡಲು ಸದಾ ಸಿದ್ಧನಿದ್ದೇನೆ’ ಎಂದರು.
ಕಿಸಾನ ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷ ಅನಿಲ್ ಶಿಂಧೆ ಮಾತನಾಡಿ, ‘ನಮ್ಮ ತಂದೆ ಬಾಬಾರಾವ್ ಹೊನ್ನಾಳಿಕರ ಅವರು ಗ್ರಾಮೀಣ ಭಾಗದ ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದಲೇ ಕಿಸಾನ ಶಿಕ್ಷಣ ಪ್ರಸಾರಕ ಮಂಡಳವನ್ನು 1973-74ರಲ್ಲಿ ಸ್ಥಾಪಿಸಿದ್ದಾರೆ. ನಮ್ಮ ಸಂಸ್ಥೆಯಲ್ಲಿ ಕಲಿತ ಸಾವಿರಾರು ಮಕ್ಕಳು ದೇಶ, ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ’ ಎಂದರು.
ಬೆಂಗಳೂರಿನ ಮಂಜುನಾಥ ಭಾರತಿ ಸ್ವಾಮಿಜಿ, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪೌರಾಡಳಿತ ಸಚಿವ ರಹೀಂಖಾನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಸಂಸದ ಸಾಗರ್ ಖಂಡ್ರೆ, ನೀಲಂಗಾ ಶಾಸಕ ಸಂಭಾಜಿರಾವ್ ಪಾಟೀಲ ನೀಲಂಗೆಕರ್, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಎಮ್ಮೆಲ್ಸಿ ಮಾರುತಿರಾವ್ ಮುಳೆ, ಮಾಜಿ ಎಂ.ಪಿ. ರವೀಂದ್ರ ಗಾಯಕವಾಡ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಾಜಿ ಎಮ್ಮೆಲ್ಸಿ ವಿಜಯಸಿಂಗ್, ಎನ್‍ಎಸ್‍ಎಸ್‍ಕೆ ಮಾಜಿ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿ, ದಿ.ಬಾಬಾರಾವ್ ಹೊನ್ನಾಳಿಕರ್ ಅವರ ಅಕ್ಷರ ಕ್ರಾಂತಿಯಿಂದ ಸಾವಿರಾರು ಜನ ಉದ್ಯೋಗಗಿಟ್ಟಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯದರ್ಶಿ ಡಾ.ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ ಸಚಿವ ಈಶ್ವರ ಖಂಡ್ರೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಅಶೋಕರಾವ್ ಸೋನಜಿ, ರಾಮರಾವ್ ವರವಟ್ಟಿಕರ್, ಅಶೋಕರಾವ್ ಸೂರ್ಯವಂಶಿ, ದಿಗಂಬರರಾವ್ ಮಾನಕಾರಿ, ಪ್ರತಾಪರಾವ್ ಪಾಟೀಲ, ಕೃಷ್ಣಕಾಂತ ಶಿಂದೆ, ರಘುನಾಥರಾವ್ ಜಾಧವ, ಅನಂತ ಪಾಟೀಲ, ಅಶೋಕರಾವ ಪಾಟೀಲ, ವಾಮನರಾವ್ ಕಾಳೆ, ಡಾ.ದಿನಕರರಾವ್ ಮೋರೆ, ವೆಂಕಟರಾವ್ ನೆಲವಾಡೆ ಇದ್ದರು. ತುಕಾರಾಮ ಮೋರೆ, ಆರತಿ ಪಾತ್ರೆ ನಿರೂಪಿಸಿದರು. ದಿಗಂಬರಾವ್ ಮಾನಕರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.