ADVERTISEMENT

ಖಾಲಿ ಹುದ್ದೆ ಭರ್ತಿ ಯಾವಾಗ: ಶಾಸಕ ಬೆಲ್ದಾಳೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:35 IST
Last Updated 14 ಡಿಸೆಂಬರ್ 2025, 6:35 IST
ಡಾ. ಶೈಲೇಂದ್ರ ಕೆ. ಬೆಲ್ದಾಳೆ
ಡಾ. ಶೈಲೇಂದ್ರ ಕೆ. ಬೆಲ್ದಾಳೆ   

ಬೀದರ್‌: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 30 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತೀರಿ’

ಹೀಗೆಂದು ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಶ್ನಿಸಿದವರು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ.

ಹುದ್ದೆಗಳು ತುಂಬದ ಕಾರಣ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಐದು ವರ್ಷಗಳಲ್ಲಿ ಹಂತ-ಹಂತವಾಗಿ ಹುದ್ದೆ ಭರ್ತಿ ಮಾಡುತ್ತೇವೆ ಎಂಬ ಸರ್ಕಾರದ ಭರವಸೆ ಹುಸಿಯಾಗಿದೆ. ಹಿಂದಿನ ಎರಡೂವರೆ ವರ್ಷದಲ್ಲಿ 3 ಸಾವಿರ ಹುದ್ದೆ ಸಹ ತುಂಬಿಲ್ಲ. ಬೀದರ್ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿಗೆ ಎರಡ್ಮೂರು ಪ್ರಭಾರ. ಹೀಗಾದರೆ ಅವರು ಕೆಲಸ ಹೇಗೆ ಮಾಡುತ್ತಾರೆ? ಜನರ ಸಮಸ್ಯೆಗೆ ಸ್ಪಂದನೆ ಹೇಗೆ? ಅಭಿವೃದ್ಧಿಗೆ ವೇಗ ಎಲ್ಲಿಂದ ಸಿಗುತ್ತದೆ ಎಂದು ಪ್ರಶ್ನಿಸಿದರು.

ADVERTISEMENT

ವಾರ್ಷಿಕ ತಲಾ ಆದಾಯದಲ್ಲಿ ಕರ್ನಾಟಕ ನಂಬರ್ ಒನ್ ಇದ್ದರೂ, ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು ತೀರ ಹಿಂದುಳಿದಿವೆ. ತಲಾ ಆದಾಯ ಅಂಕಿ ಸಂಖ್ಯೆ ಗಮನಿಸಿದರೆ ನಮ್ಮ ಭಾಗದ ಆರ್ಥಿಕತೆ ಹಾಗೂ ಜನರ ಜೀವನಮಟ್ಟ  ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ತೋರಿಸುತ್ತದೆ. ಸರ್ಕಾರ ಇದನ್ನು ಗಂಭೀರ ಪರಿಗಣಿಸಿ ತಲಾ ಆದಾಯ ಹೆಚ್ಚಳಕ್ಕೆ ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಶುಕ್ರವಾರ ಉತ್ತರ ಕರ್ನಾಟಕ ಭಾಗದ ವಿಶೇಷ ಚರ್ಚೆ ಮೇಲೆ ಮಾತನಾಡಿದ ಅವರು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಸೇರಿ ಎಲ್ಲ ಜಿಲ್ಲೆಗಳು ತಲಾ ಆದಾಯದಲ್ಲಿ ಕೊನೆ ಸ್ಥಾನದಲ್ಲಿರುವುದು 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ, ಹಣಕಾಸು ಇಲಾಖೆ ಅಂಕಿಅಂಶ ತಿಳಿಸುತ್ತಿವೆ. ಬೆಂಗಳೂರಿನ ತಲಾ ಆದಾಯ 6 ಲಕ್ಷಕ್ಕೂ ಹೆಚ್ಚಿದೆ. ನಮ್ಮ ಜಿಲ್ಲೆಗಳ ಪ್ರಮಾಣ ₹1.50 ಲಕ್ಷ ದಾಟಿಲ್ಲ. ಕಲ್ಯಾಣ ಕರ್ನಾಟಕ ವಿಭಾಗ ಕೇಂದ್ರ ಕಲಬುರಗಿ ಜಿಲ್ಲೆಯ ತಲಾ ಆದಾಯ ರಾಜ್ಯದಲ್ಲೇ ಅತಿ ಕಡಿಮೆ ₹1.30 ಲಕ್ಷವಿದೆ. ಈ ಸಂಖ್ಯೆ ಕಳವಳಕಾರಿಯಾಗಿವೆ. ಸರ್ಕಾರ ಏನು ಮಾಡುತ್ತಿದೆ  ಎಂದು ಪ್ರಶ್ನಿಸಿ ಸದನದ ಗಮನ ಸೆಳೆದರು.

Cut-off box - ಕಾರಂಜಾ ಸಂತ್ರಸ್ತರು ವಿಷ ಕೇಳ್ತಿದ್ದಾರೆ’ ವೈಜ್ಞಾನಿಕ ಪರಿಹಾರಕ್ಕಾಗಿ ದಶಕಗಳಿಂದ ಹೋರಾಟ ನಡೆಸಿರುವ ಕಾರಂಜಾ ನೀರಾವರಿ ಯೋಜನೆ ಮುಳುಗಡೆ ಸಂತ್ರಸ್ತರು ಮನೆಗೆ ಬಂದು ವಿಷ ಕೊಡಿ ಅಂತಿದ್ದಾರೆ ಇವರ ಸಮಸ್ಯೆ ಬೇಗ ಪರಿಹರಿಸಿ ಎಂದು ಶಾಸಕ ಬೆಲ್ದಾಳೆ ಸದನದ ಗಮನ ಸೆಳೆದರು. ಈ ಹಿಂದೆ ರೈತರು ಅಹೋರಾತ್ರಿ ಧರಣಿ ನಡೆಸಿದ್ದರು. ಇವರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಪ್ರಾದೇಶಿಕ ಆಯುಕ್ತರಿಂದ 3 ತಿಂಗಳಲ್ಲಿ ಸಮಗ್ರ ವರದಿ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಆದರೆ ಎಂಟು ತಿಂಗಳಾದರೂ ಏನೂ ಆಗಿಲ್ಲ. ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಾನು ಧರಣಿ ಸ್ಥಳಕ್ಕೆ ಹೋಗಿ ರೈತರಿಗೆ ಜ್ಯೂಸ್ ಕುಡಿಸಿ ಧರಣಿ ಹಿಂಪಡೆಯಲು ಕೋರಿದ್ದೆವು. ಇದಕ್ಕೆ ಸ್ಪಂದಿಸಿ ಅವರು ಧರಣಿ ಕೈಬಿಟ್ಟರು. ಆದರೀಗ ಮನೆಗೆ ಬಂದು ಆಗ ಜ್ಯೂಸ್ ಕೊಟ್ಟಿರಿ ಈಗ ವಿಷ ಕೊಡಿ ಅಂತಿದ್ದಾರೆ. ಏನ್ಮಾಡೋದು ಹೇಳಿ ಸರ್? ರೈತರು ಮತ್ತೆ ಡು ಆರ್ ಡೈ ಹೋರಾಟಕ್ಕಿಳಿಯುವ ಮುನ್ನ ಇವರ ಬೇಡಿಕೆ ಈಡೇರಿಸಿ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.