ADVERTISEMENT

ಪ್ರಭು ಚವಾಣ್‌ ಶಾಸಕತ್ವ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 16:03 IST
Last Updated 1 ಏಪ್ರಿಲ್ 2025, 16:03 IST
ಸೋಮನಾಥ
ಸೋಮನಾಥ   

ಬೀದರ್‌: ‘ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ವಂಚಿಸಿರುವ ಔರಾದ್‌ ಮೀಸಲು ಕ್ಷೇತ್ರದ ಶಾಸಕ ಪ್ರಭು ಚವಾಣ್‌ ಅವರ ಶಾಸಕತ್ವ ರದ್ದುಗೊಳಿಸಬೇಕು’ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಮುಖ ಸೋಮನಾಥ ಮುಧೋಳಕರ್ ಒತ್ತಾಯಿಸಿದರು.

ನಕಲಿ ಜಾತಿ ಪ್ರಮಾಣ ಪತ್ರದಿಂದಲೇ ಕನ್ನಡಿಗರ ಎಲ್ಲ ಹಕ್ಕುಗಳನ್ನು ಕಬಳಿಸಿರುವ ಚವಾಣ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಇದುವರೆಗೆ ಅವರು ಸರ್ಕಾರದಿಂದ ಪಡೆದ ಎಲ್ಲ ಸೌಕರ್ಯಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಬೇಕೆಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಭು ಚವಾಣ್‌ ಮೂಲತಃ ಮಹಾರಾಷ್ಟ್ರದವರು. ತನ್ನ ಪ್ರಭಾವ ಬಳಸಿಕೊಂಡು ಔರಾದ್‌ ತಹಶೀಲ್ದಾರ್‌ ಮೂಲಕ ತನ್ನ ಹಾಗೂ ತನ್ನ ಕುಟುಂಬದವರು ಪರಿಶಿಷ್ಟ ಜಾತಿಗೆ ಸೇರಿದವರೆಂದು ಜಾತಿ ಪ್ರಮಾಣ ಪತ್ರ ಪಡೆದು ಕನ್ನಡಿಗರಿಗೆ ಮೋಸ ಮಾಡಿದ್ದಾರೆ. ಈ ಸಂಬಂಧ ಹಲವು ಮೇಲ್ಮನವಿ ಪ್ರಾಧಿಕಾರ ಹಾಗೂ ನ್ಯಾಯಾಲಯದಲ್ಲಿ ಅಕ್ಷೇಪಣೆ ಸಲ್ಲಿಸಿದರೂ ಅಲ್ಲಿ ಕೂಡ ತನ್ನ ಪ್ರಭಾವ ಬಳಸಿಕೊಂಡು ಅರ್ಜಿ ವಾಪಸ್ ಪಡೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

2023ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಔರಾದ್‌ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಮಲನಗರ ತಾಲ್ಲೂಕಿನ ಹಾಲಳ್ಳಿ ಗ್ರಾಮದ ನಿವಾಸಿ ನರಸಿಂಗ ತುಕಾರಾಮ ಅವರು ಚವಾಣ್‌ ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಈ ಸಂಬಂಧ ಚವಾಣ್‌ ಅವರಿಗೆ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗುವಂತೆ ಮೇಲ್ಮನವಿ ಪ್ರಾಧಿಕಾರವು ಸೂಚಿಸಿದೆ. ಆದರೆ, ಚವಾಣ್‌ ಅವರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.ಸುಮಾರು ಎರಡು ವರ್ಷಗಳ ಕಾಲ ವಾದಿ ಪ್ರತಿವಾದಿಗಳ ವಾದವನ್ನು ಆಲಿಸಿ ಮಾರ್ಚ್‌ 17ರಂದು ಕಲಬುರಗಿ ಹೈಕೋರ್ಟ್ ಪೀಠದ ನ್ಯಾಯಾಧೀಶ ಸೂರಜ್ ಗೋವಿಂದರಾಜ್ ಅವರು 220 ಪುಟಗಳ ತೀರ್ಪು ನೀಡಿದ್ದಾರೆ ಎಂದು ಗಮನ ಸೆಳೆದರು.

2008ರಿಂದ ಇದುವರೆಗೆ ಎಷ್ಟೋ ಜನರು ನ್ಯಾಯಾಲಯಕ್ಕೆ ಹಾಗೂ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೋ ಅವರೆಲ್ಲರ ಅರ್ಜಿಗಳನ್ನು ಪ್ರಭು ಚವಾಣ್ ಅವರು ತಮ್ಮ ಪ್ರಭಾವ ಬಳಸಿ ಹಿಂಪಡೆಯುವಂತೆ ಮಾಡಿದ್ದಾರೆ.ಈ ಮೂಲಕ ಕಾಲಹರಣ ಮಾಡಿ, ಕನ್ನಡಿಗರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 30 ದಿನಗಳ ಒಳಗಾಗಿ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಬೇಕು. ಚವಾಣ್‌ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಬೀದರ್‌ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡಪರ ಸಂಘಟನೆಗಳ ಪ್ರಮುಖರಾದ ರವಿಸ್ವಾಮಿ ನಿರ್ಣಾ, ಸುಭಾಷ ಕೆನಾಡೆ, ನಿತೀಶ ಉಪ್ಪೆ, ಸೋಮನಾಥ ವರವಟ್ಟಿ (ಕೆ), ರಮೇಶ ಧೂಳಾ, ಚರಣಜೀತ ಆಣದೂರೆ, ವಿವೇಕ ಸ್ವಾಮಿ, ಶಾಮ್ ಮದನ್‌, ಧನರಾಜ ಸಾಂಗವಿಕರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.