ADVERTISEMENT

ಮೋಳಕೇರಾದಲ್ಲಿ ಸ್ಫೋಟ: ಆತಂಕ ಪಡದಂತೆ ಸಚಿವ ಈಶ್ವರ ಖಂಡ್ರೆ ಗ್ರಾಮಸ್ಥರಿಗೆ ಅಭಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:16 IST
Last Updated 2 ಫೆಬ್ರುವರಿ 2026, 3:16 IST
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಹುಮನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಸಂಭವಿಸಿದ ಸ್ಫೋಟ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದರು. ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಮತ್ತಿತರರು ಇದ್ದಾರೆ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಹುಮನಾಬಾದ್‌ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಸಂಭವಿಸಿದ ಸ್ಫೋಟ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದರು. ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌ ಮತ್ತಿತರರು ಇದ್ದಾರೆ   

ಬೀದರ್: ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಸ್ಫೋಟ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರಿಂದ ಮಾಹಿತಿ ಪಡೆದರು. ಬಳಿಕ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹೊರವಲಯದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

‘ಗ್ರಾಮದಲ್ಲಿ ಈ ಹಿಂದೆಯೂ ಸ್ಫೋಟಗಳು ಸಂಭವಿಸಿವೆ. ಈ ವಿಷಯ ತಿಳಿಸಿದ್ದರೂ ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದರಿಂದ ಈಗ ದೊಡ್ಡ ಸಮಸ್ಯೆ ಉಂಟಾಗಿದೆ. ಕೆಲವರು ಕೆಮಿಕಲ್ ತಂದು ಗ್ರಾಮದ ಸುತ್ತಮುತ್ತ ನೆಲದೊಳಗೆ ಬಿಡುತ್ತಿದ್ದಾರೆ. ಅವರು ಯಾರು ಗೊತ್ತಾಗುತ್ತಿಲ್ಲ. ಇದರ ಹಿಂದೆ ಯಾರಿದ್ದಾರೋ. ಎಲ್ಲಿಂದಲೋ ಕೆಮಿಕಲ್‌ ತಂದು ಸುರಿದು ಹೋಗುತ್ತಿದ್ದಾರೆ. ನೆಲ, ಜಲ ವಿಷವಾಗಿದೆ. ಉಸಿರಾಡುವ ಗಾಳಿ ಕೂಡ ವಿಷವಾಗುತ್ತಿದೆ. ಗ್ರಾಮದ ದನ ಕರುಗಳು ಸಾಯುತ್ತಿವೆ. ಚರ್ಮ ರೋಗ ಬರುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಗಡವಂತಿ, ಮಾಣಿಕ್‌ನಗರ, ಧುಮ್ಮನಸೂರನಲ್ಲೂ ಇದೇ ರೀತಿಯ ಸಮಸ್ಯೆ’ ಎಂದು ಗ್ರಾಮಸ್ಥರು ಗಮನ ಸೆಳೆದರು.

ADVERTISEMENT

ಅದಕ್ಕೆ ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯಿಸಿ, ಸರ್ಕಾರ ಸ್ಫೋಟ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ಉನ್ನತಮಟ್ಟದ ತಜ್ಞರಿಂದ ತನಿಖೆ ನಡೆಸಿ, ವಾರದೊಳಗೆ ವರದಿ ತರಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆಮಿಕಲ್, ವಿಧಿ ವಿಜ್ಞಾನ ಪ್ರಯೋಗಾಲಯದವರು ತನಿಖೆ ಕೈಗೊಂಡಿದ್ದಾರೆ. ಈಗ ಯಾರು ಆತಂಕ ಪಡಬೇಕಿಲ್ಲ‌. ಮುಂದೆ ಈ ರೀತಿಯ ಘಟನೆಗಳು ಆಗದ ರೀತಿಯಲ್ಲಿ ಎಲ್ಲ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

‘ಪದೇ ಪದೇ ಸ್ಫೋಟಗಳಿಂದ ನಮ್ಮ ನೆಮ್ಮದಿ ಹಾಳಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕಿಕೊಡಬೇಕು. ನೆಮ್ಮದಿಯಿಂದ ಬದುಕಲು ವಾತಾವರಣ ನಿರ್ಮಿಸಬೇಕು’ ಎಂದು ಗ್ರಾಮದ ಕೆಲ ಮಹಿಳೆಯರು ಕಣ್ಣೀರು ಹಾಕಿದರು. ಅವರಿಗೆ ಸಾಂತ್ವನ ಹೇಳಿದ ಸಚಿವರು, ಸರಿಪಡಿಸುವ ಭರವಸೆ ನೀಡಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ್‌ ಪಾಟೀಲ್‌, ಮಾಜಿಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡಿ ಹಾಜರಿದ್ದರು.

ಮೋಳಕೇರಾ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ತಮ್ಮ ಅಹವಾಲು ಹೇಳಲು ಜನ ಸೇರಿರುವುದು
ಘಟನೆ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ. ಸಂಪೂರ್ಣ ತನಿಖಾ ವರದಿ ಬಂದ ತಕ್ಷಣ ವರದಿ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಯಾರೇ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಲೋಪ ಕಂಡು ಬಂದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.
–ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಆರೋಪಿಗಳ ಬಂಧಿಸಿ ವಿಚಾರಣೆ

ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡು ನಗರದ ಬ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಮಕ್ಕಳನ್ನು ಸಚಿವ ಈಶ್ವರ ಬಿ. ಖಂಡ್ರೆ ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಖಂಡ್ರೆ ಸ್ಫೋಟದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು ಆರು ಜನ ಗಾಯಗೊಂಡಿದ್ದಾರೆ. ಅವರಿಗೆ ಜಿಲ್ಲಾಡಳಿತದಿಂದ ಉತ್ತಮ ಚಿಕಿತ್ಸೆ ಕೊಡಲಾಗುತ್ತಿದೆ. ಆಸ್ಪತ್ರೆಯ ಸಂಪೂರ್ಣ ವೆಚ್ಚ ಜಿಲ್ಲಾಡಳಿತ ಭರಿಸಲಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು. ಘಟನೆಯಲ್ಲಿ ಯಾರೇ ಶಾಮಿಲಾಗಿದ್ದರೂ ಅವರ ವಿರುದ ಕಾನೂನು ಕ್ರಮ ಜರುಗಿಸಲಾಗುವುದು. ತನಿಖೆ ಪ್ರಗತಿಯಲ್ಲಿದೆ. ಘಟನೆ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಲ್ಲ ಮಾಹಿತಿ ಹಂಚಿಕೊಂಡಿದ್ದೇನೆ ಎಂದರು. ಮೋಳಕೇರಾ ಗ್ರಾಮದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಆರು ಜನ ಗಾಯಗೊಂಡಿದ್ದರು. ಮೂವರು ಮಕ್ಕಳು ಬ್ರಿಮ್ಸ್ ಇನ್ನೊಬ್ಬ ಅಪ್ರಾಪ್ತನಿಗೆ ಖಾಸಗಿ ಆಸ್ಪತ್ರೆ ಹಾಗೂ ಇಬ್ಬರು ವಯಸ್ಕರಿಗೆ ಕ್ರಮವಾಗಿ ಹೈದರಾಬಾದ್ ಹಾಗೂ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.