ADVERTISEMENT

ಬೀದರ್ | ಮೊರಾರ್ಜಿ ಶಾಲೆಯಲ್ಲಿ ಬಿಸಿ ನೀರಿಲ್ಲದೆ ವಿದ್ಯಾರ್ಥಿಗಳ ಪರದಾಟ!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:10 IST
Last Updated 9 ಸೆಪ್ಟೆಂಬರ್ 2025, 5:10 IST
ಹುಲಸೂರ ಪಟ್ಟಣದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ
ಹುಲಸೂರ ಪಟ್ಟಣದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ   

ಹುಲಸೂರ: ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕಳೆದ ಮೂರು ತಿಂಗಳಿಂದ ಮಕ್ಕಳ ಸ್ನಾನಕ್ಕೆ ಬಿಸಿ ನೀರಿಲ್ಲ. ಮಕ್ಕಳು ತಣ್ಣೀರಿನ ಸ್ನಾನ ಮಾಡುತ್ತಿರುವುದರಿಂದಾಗಿ, ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಶೀಘ್ರ ಬಿಸಿನೀರಿನ ವ್ಯವಸ್ಥೆ ಮಾಡಬೇಕು ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಸತಿ ನಿಲಯದಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ಒಟ್ಟು 230 ವಿದ್ಯಾರ್ಥಿಗಳಿದ್ದಾರೆ. ಸುಸಜ್ಜಿತ ಶಾಲಾ ಕಟ್ಟಡ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳ ವ್ಯವಸ್ಥೆಯಿದೆ. ಆದರೆ, ಶಾಲೆಯಲ್ಲಿ ಇಬ್ಬರಿಗೂ ಸ್ನಾನಕ್ಕೆ ಬಿಸಿ ನೀರಿಲ್ಲದಿರುವುದು, ಪಾಲಕರನ್ನು ಚಿಂತೆಗೀಡು ಮಾಡಿದೆ. ಈ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ತಮ್ಮ ಪಾಲಕರ ಗಮನಕ್ಕೂ ತಂದಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣಕ್ಕಾಗಿ ವಸತಿ ನಿಲಯ ಆರಂಭಿಸಲಾಗಿದೆ. ಆದರೆ ವಸತಿ ನಿಲಯದಲ್ಲಿ ಒಟ್ಟೊಟ್ಟಿಗೆ ಇರುವುದು ಹಾಗೂ ವಸ್ತುಗಳನ್ನು ಬಳಸುವುದರಿಂದಾಗಿ ಮಕ್ಕಳಲ್ಲಿ ಚರ್ಮದ ಸಮಸ್ಯೆಗಳಾದ ಕಜ್ಜಿ, ಸೀಬು, ತಾಕಾ, ತುರಿಕೆ, ಉರಿ, ತಣ್ಣನೆಯ ಗಂಟುಗಳು, ಶಿಲೀಂಧ್ರಗಳು ಉಂಟುಮಾಡುವ ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ, ಚರ್ಮರೋಗ ಹೆಚ್ಚಾಗಿ ಕಂಡು ಬರುತ್ತಿರುವುದು ಪಾಲಕರ ಆತಂಕ ಹೆಚ್ಚಿಸಿದೆ.

ADVERTISEMENT

ಈಗಾಗಲೇ ಆರೋಗ್ಯ ಇಲಾಖೆಯಿಂದ ವರ್ಷಕ್ಕೆ ಕನಿಷ್ಠ ಎರಡು ಅಥವಾ ಮೂರು ಬಾರಿ ಚರ್ಮರೋಗ ತಜ್ಞರಿಂದ ತಪಾಸಣೆ, ಚರ್ಮದ ಜೊತೆಗೆ ಔಷಧ ಒದಗಿಸಬೇಕು ಎಂದು ಸರ್ಕಾರ ಆದೇಶ ನೀಡಿದೆ. ಆದರೆ ಸದುಪಯೋಗ ಆಗುತ್ತಿಲ್ಲ ಎಂದು ಪಾಲಕರು ಆರೋಪಿಸಿದ್ದಾರೆ.

ಮಕ್ಕಳಲ್ಲಿ ಚರ್ಮ ರೋಗದ ಸಮಸ್ಯೆ ‘ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿಲ್ಲ. ವಸತಿ ನಿಲಯದಲ್ಲಿ ಹತ್ತಾರು ಸಮಸ್ಯೆಗಳಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನಿಲಯದ ಪ್ರಭಾರ ಮೇಲ್ವಿಚಾರಕ, ‘ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಪ್ರಾಂಶುಪಾಲರು, ವಾರ್ಡನ್ ಅಸಹಾಯಕರಾಗಿದ್ದಾರೆ. ಜಿಲ್ಲಾಡಳಿತವೇ ನಮ್ಮ ನೆರವಿಗೆ ಬರಬೇಕು’ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.

ಹುಲಸೂರ ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿನ ತೆರದ ಜಿಮ್ ಸುತ್ತಲೂ ಹುಲ್ಲು-ಗಿಡಗಂಟಿ ಬೆಳೆದಿರುವುದು
ಶೀಘ್ರ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡುತ್ತೇನೆ. ವಸತಿ ನಿಲಯವನ್ನು ಪರಿಶೀಲಿಸುತ್ತೇನೆ.
ದಿಲೀಪ ಗೌತಮ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ

ವಸತಿ ನಿಲಯದಲ್ಲಿ ಕಳೆದ ಮೂರು ತಿಂಗಳಿಂದ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ತಣ್ಣೀರಿನ ಸ್ನಾನದಿಂದಾಗಿ ಕೆಲವರಿಗೆ ತಲೆನೋವು ನೆಗಡಿ ಕೆಮ್ಮು ಜ್ವರ ಹಾಗೂ ಚರ್ಮ ರೋಗ ಬರುತ್ತಿದೆ ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಗಳು.

ಮಕ್ಕಳಿಗೆ ಮೂರು ತಿಂಗಳಿಂದ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸದೆ ಇರುವುದು ಅಪರಾಧ. ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಶಶಿಧರ ಕೋಸಂಬೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ಪ್ರಾಂಶುಪಾಲರ ವಸತಿ ನಿಲಯದಲ್ಲಿ ವಾರ್ಡನ್ ವಾಸ ವಸತಿ ಶಾಲೆಯಲ್ಲಿ ಶಾಲೆಯ ಪ್ರಾಂಶುಪಾಲರು ವಾಸವಾಗಿಲ್ಲ. ಬದಲಿಗೆ ಅವರ ನಿಲಯದಲ್ಲಿ ವಾರ್ಡನ್ ವಾಸಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಯಾವುದೇ ಸಮಸ್ಯೆ ಪ್ರಾಂಶುಪಾಲರ ಗಮನಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಪ್ರಾಂಶುಪಾಲರು ಕೂಡ ವಸತಿ ನಿಲಯದಲ್ಲಿ ವಾಸಿಸಬೇಕು ಎಂದು ಪಾಲಕರು ಅಗ್ರಹಿಸಿದ್ದಾರೆ. ನಿರ್ವಹಣೆ ಆಗದ ತೆರೆದ ಜಿಮ್! ವಸತಿ ಶಾಲೆಯಲ್ಲಿ ಸಂಸದರ ನಿಧಿಯಲ್ಲಿ ಅಂದಾಜು ₹ 20 ಲಕ್ಷ ವೆಚ್ಚದಲ್ಲಿ ಮಕ್ಕಳ ದೈಹಿಕ ಸದೃಢತೆಗಾಗಿ ತೆರೆದ ಜಿಮ್‍ಗಳನ್ನು ಸ್ಥಾಪಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ ತೆರದ ಜಿಮ್ ಸುತ್ತಲೂ ಹುಲ್ಲು–ಗಿಡಗಂಟೆ ಬೆಳೆದಿದ್ದು ಕ್ರಿಮಿಕಿಟಗಳು ವಾಸಿಸುವ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳು ಜೀವಭಯದಲ್ಲಿ ವ್ಯಾಯಾಮ ಮಾಡಬೇಕಾಗಿದೆ. ಈ ಸಂಬಂಧ ಪ್ರಾಂಶುಪಾಲ ದಿಗಂಬರ ಕಿವಡೆ ಅವರನ್ನೂ ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ಈಗಾಗಲೇ ಈ ವಿಷಯದ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅನುದಾನದ ಕೊರತೆಯಿಂದಾಗಿ ಸಮಸ್ಯೆ ಉದ್ಬವಿಸಿದ್ದು ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳು ಸೂಚಿಸಿದ್ದಾರೆ’ ಎಂದು ಹೇಳಿದರು. ಬೆಳಕು ಚೆಲ್ಲದ ಸೋಲಾರ್ ವಿದ್ಯುತ್ ದೀಪ ವಸತಿ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಕೆಕೆಆರ್‌ಡಿಬಿಯ ನಿರ್ಮಿತಿ ಕೇಂದ್ರದಿಂದ ₹ 14.55 ಲಕ್ಷ ವೆಚ್ಚದಲ್ಲಿ ಸೋಲಾರ ಹೈಮಾಸ್ಟ್ ದೀಪವನ್ನು ಅಳವಡಿಸಲಾಗಿತ್ತು. ಒಂದೇ ವರ್ಷದಲ್ಲಿ ಹೈಮಾಸ್ಟ್‌ ಹಾಳಾಗಿದೆ. ಕಂಬವೂ ಅಲುಗಾಡುತ್ತಿದ್ದು ಬಿರುಗಾಳಿ ಬೀಸಿದರೆ ಕಂಬ ಉರುಳುವ ಆತಂಕವಿದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕದಿಂದಲೇ ಓಡಾಡುವಂತಾಗಿದ್ದು ಅನಾಹುತ ಸಂಭವಿಸುವ ಮೊದಲು ಕಂಬ ದುರಸ್ತಿಗೊಳಿಸಿ ದೀಪ ಉರಿಯುವಂತೆ ಮಾಡಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.