ADVERTISEMENT

ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಜಾತ್ರೆ ನಿಮಿತ್ತ ಇಂದಿನಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ

ಮಾಣಿಕ ಆರ್ ಭುರೆ
Published 21 ಜನವರಿ 2026, 4:56 IST
Last Updated 21 ಜನವರಿ 2026, 4:56 IST
ಬಸವಕಲ್ಯಾಣದ ತ್ರಿಪುರಾಂತದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಜಗದ್ಗುರು ಮೌನೇಶ್ವರರ ದೇವಸ್ಥಾನ
ಬಸವಕಲ್ಯಾಣದ ತ್ರಿಪುರಾಂತದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಜಗದ್ಗುರು ಮೌನೇಶ್ವರರ ದೇವಸ್ಥಾನ   

ಬಸವಕಲ್ಯಾಣ: ಈ ಭಾಗದಲ್ಲೇ ಅತ್ಯಂತ ದೊಡ್ಡ ಮಂದಿರ ಆಗಿರುವ ಜಗದ್ಗುರು ಮೌನೇಶ್ವರರ ದೇವಸ್ಥಾನವು ಅಪಾರ ಜನರ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿದೆ. ಇಲ್ಲಿ ಜಾತ್ರೆ ಅಂಗವಾಗಿ ಜನವರಿ 21ರಿಂದ 25 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ.

ಮೌನೇಶ್ವರರು ಸರ್ವಧರ್ಮ ಸಮನ್ವತೆಯ ಹರಿಕಾರ ಎಂದೇ ಗುರುತಿಸಿಕೊಂಡವರು. ತ್ರಿಪುರಾಂತ ಕಲ್ಯಾಣ ಮಂಟಪ ರಸ್ತೆಯಲ್ಲಿನ ಅವರ ಎರಡು ಅಂತಸ್ತಿನ ದೇವಸ್ಥಾನದಲ್ಲಿ ಆಕರ್ಷಕ ಗರ್ಭಗೃಹ, ಮುಖ ಮಂಟಪ ಮತ್ತು ಸಭಾ ಮಂಟಪವಿದೆ. ಮುಖ್ಯ ರಸ್ತೆ ಪಕ್ಕದ ಪೂರ್ವಾಭಿಮುಖವಾದ ನಾಮಫಲಕ ಬರೆದಿರುವ ಸ್ವಾಗತ ಕಮಾನಿನಿಂದ ಒಳಬಂದರೆ ಸಮೀಪವೇ ದೇವಸ್ಥಾನದ ಭವ್ಯ ಕಟ್ಟಡ ಎದುರಾಗುತ್ತದೆ. ಇಲ್ಲಿ ಶ್ರಾವಣ ಮಾಸ, ಜಾತ್ರೆ ಮತ್ತು ಹಬ್ಬಗಳಂದು ಅನೇಕ ಭಕ್ತರು ದರ್ಶನಕ್ಕೆ ಬರುತ್ತಾರೆ.

ಜಾತ್ರೆ ಅಂಗವಾಗಿ ಜನವರಿ 23 ರವರೆಗೆ ಸಂಜೆ 6 ಗಂಟೆಗೆ ಶಹಾಪುರದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಅವರಿಂದ ಜಗದ್ಗುರು ಶ್ರೀ ಮೌನೇಶ್ವರರ ಪುರಾಣ ಪ್ರವಚನ ನಡೆಯಲಿದೆ. ಜನವರಿ 24 ರಂದು ಸಂಜೆ 5 ಗಂಟೆಗೆ ಯಾದಗಿರಿ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ವಿವಿಧ ಕ್ಷೇತ್ರದ ಸಾಧಕರಾದ ಪ್ರಭು ಪಾಟೀಲ, ಶಶಿಕಾಂತ ದುರ್ಗೆ, ಡಾ.ಬಸವರಾಜ ಸ್ವಾಮಿ, ಪ್ರಾಚಾರ್ಯ ಸೂರ್ಯಕಾಂತ ಶೀಲವಂತ, ಮಾಣಿಕರಾವ್ ಅವರ ವಿಶೇಷ ಗೌರವ ಸನ್ಮಾನವಿರುತ್ತದೆ. ಪ್ರಸಿದ್ಧ ಸಂಗೀತಗಾರ ಶಿವಕುಮಾರ ಪಂಚಾಳ ಅವರಿಂದ ಸಂಗೀತ ಪ್ರಸ್ತುತಪಡಿಸಲಾಗುತ್ತದೆ. ಇದಕ್ಕೂ ಮೊದಲು ಧ್ವಜಾರೋಹಣ, ಅಭಿಷೇಕವಿರುತ್ತದೆ. ಸಾಮೂಹಿಕ ಉಪನಯನವೂ ನಡೆಯಲಿದೆ.

ADVERTISEMENT

ಜನವರಿ 25 ರಂದು ಮಧ್ಯಾಹ್ನ 3 ಗಂಟೆಗೆ ಧರ್ಮಸಭೆ ನಡೆಯುವುದು. ಗುರುನಾಥೇಂದ್ರ ಸ್ವಾಮೀಜಿ, ಶ್ರೀನಿವಾಸ ಸ್ವಾಮೀಜಿ, ಸಸ್ತಾಪುರ ಸದಾನಂದ ಸ್ವಾಮೀಜಿ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಖೇರ್ಡಾ ಶಿವಲಿಂಗೇಶ್ವರ ಸ್ವಾಮೀಜಿ, ಗಣಜಲಖೇಡ ನಾಗೇಶ ಮುತ್ಯಾ ಸಾನ್ನಿಧ್ಯ ವಹಿಸುವರು. ಶಾಸಕ ಶರಣು ಸಲಗರ ಉದ್ಘಾಟಿಸುವರು. ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಬಸವಕಲ್ಯಾಣದ ತ್ರಿಪುರಾಂತದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಜಗದ್ಗುರು ಮೌನೇಶ್ವರರ ದೇವಸ್ಥಾನದಲ್ಲಿನ ಮೂರ್ತಿ
ಜನವರಿ 25 ರಂದು ಬೆಳಿಗ್ಗೆ 9 ಗಂಟೆಗೆ ಕುಂಭ ಕಲಶ ಪುರವಂತರ ಕಲಾತಂಡ ವಾದ್ಯ ಮೇಳದೊಂದಿಗೆ ನಗರದಲ್ಲಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯುವುದು
ಈರಣ್ಣ ಪಂಚಾಳ ಅಧ್ಯಕ್ಷ ವಿಶ್ವಕರ್ಮ ಸಮಾಜ ಸಂಘ
ಜಾತ್ರೆಯು ವಿಶಿಷ್ಟವಾಗಿ ನಡೆಯುತ್ತಿದ್ದು ಈ ನಿಮಿತ್ತ ಮೌನೇಶ್ವರರ ಇತಿಹಾಸದ ಬಗ್ಗೆ ಮತ್ತು ಅವರ ವಚನಗಳ ಬಗ್ಗೆ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ವೈಜನಾಥ ಪಂಚಾಳ ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಸಮಾಜ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.