ADVERTISEMENT

ಬೀದರ್‌: ಮತ್ತೆ ಅಧಿಕಾರ ಕೇಂದ್ರಕ್ಕೆ ನಾಗಮಾರಪಳ್ಳಿ ಕುಟುಂಬ

ನಾರಂಜಾ ಸಕ್ಕರೆ ಕಾರ್ಖಾನೆಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಅಕ್ಟೋಬರ್ 2025, 6:18 IST
Last Updated 25 ಅಕ್ಟೋಬರ್ 2025, 6:18 IST
ಸೂರ್ಯಕಾಂತ ನಾಗಮಾರ‍‍ಪಳ್ಳಿ
ಸೂರ್ಯಕಾಂತ ನಾಗಮಾರ‍‍ಪಳ್ಳಿ   

ಬೀದರ್‌: ಎಲ್ಲಾ ರೀತಿಯ ಅಧಿಕಾರದ ಕೇಂದ್ರದಿಂದ ದೂರವಾಗಿದ್ದ ನಾಗಮಾರಪಳ್ಳಿ ಕುಟುಂಬ ಪುನಃ ಅಧಿಕಾರ ಸ್ಥಾನಕ್ಕೆ ಏರುವ ಕಾಲ ಸನಿಹ ಬಂದಿದೆ.

ಲಿಂಗಾಯತ ಸಮಾಜ ಹಾಗೂ ಜಿಲ್ಲೆಯ ಪ್ರಭಾವಿ ಮುಖಂಡರಾಗಿದ್ದ ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕಿರಿಯ ಮಗ, ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರ ಪೆನಾಲ್‌ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಆಡಳಿತ ಮಂಡಳಿ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಔಪಚಾರಿಕ ಪ್ರಕ್ರಿಯೆ ಮುಗಿಸುವುದಷ್ಟೇ ಬಾಕಿ ಉಳಿದಿದೆ.

ವರ್ಷದ ಹಿಂದೆ ಬೀದರ್‌ ಡಿಸಿಸಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಸೂರ್ಯಕಾಂತ ಅವರ ಸಹೋದರ ಉಮಾಕಾಂತ ನಾಗಮಾರಪಳ್ಳಿ ಅವರು ಅಮರ್‌ಕುಮಾರ್‌ ಖಂಡ್ರೆ ವಿರುದ್ಧ ಸೋಲು ಅನುಭವಿಸಿದ್ದರು. ಇದರೊಂದಿಗೆ ನಾಗಮಾರಪಳ್ಳಿ ಕುಟುಂಬದವರು ಎಲ್ಲಾ ರೀತಿಯ ಅಧಿಕಾರದ ಕೇಂದ್ರದಿಂದ ದೂರವಾಗಿದ್ದರು.

ADVERTISEMENT

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯ ರಾಜಕೀಯ, ಸಹಕಾರ ಕ್ಷೇತ್ರದ ಮೇಲೆ ನಾಗಮಾರಪಳ್ಳಿ ಕುಟುಂಬ ಹಿಡಿತ ಹೊಂದಿತ್ತು. ಕಾಲ ಕಳೆದಂತೆ ಅವರ ಪ್ರಭಾವ ಕುಗ್ಗುತ್ತ ಹೋಯಿತು. 2015ರ ನವೆಂಬರ್‌ನಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಅವರ ನಿಧನದ ನಂತರ ರಾಜಕೀಯ ಅಧಿಕಾರದಿಂದ ಈ ಕುಟುಂಬ ಹಂತ ಹಂತವಾಗಿ ಹಿನ್ನೆಲೆಗೆ ಸರಿಯಿತು. ಪ್ರಭಾವ ಸಂಪೂರ್ಣ ಕ್ಷೀಣಿಸಿತು.

ಉಪಚುನಾವಣೆ ಸೇರಿದಂತೆ ಮೂರು ಸಲ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೂರ್ಯಕಾಂತ ನಾಗಮಾರಪಳ್ಳಿ ಸೋಲು ಕಂಡಿದ್ದಾರೆ. ಎರಡು ಸಲ ಬಿಜೆಪಿ ಹಾಗೂ ಒಂದು ಸಲ ಜೆಡಿಎಸ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. 2024ರಲ್ಲಿ ಸಹಕಾರ ಕ್ಷೇತ್ರದಲ್ಲೂ ಈ ಕುಟುಂಬ ಅಧಿಕಾರ ಕಳೆದುಕೊಂಡಿತ್ತು. ಈಗ ಸೂರ್ಯಕಾಂತ ಅವರು ಸಹಕಾರ ರಂಗ ಪ್ರವೇಶಿಸಿ, ಅಧಿಕಾರದ ಚುಕ್ಕಾಣಿ ಹಿಡಿದು ಹೊಸ ಇನ್ನಿಂಗ್ಸ್‌ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ.

ಈ ಹಿಂದೆ ಸೂರ್ಯಕಾಂತ ಅವರು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿಸ್ಪೆಷಾಲಿಟಿ ಸಹಕಾರಿ ಆಸ್ಪತ್ರೆಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಆದರೆ, ಅದರ ಅಧಿಕಾರ ವ್ಯಾಪ್ತಿ ಹೇಳಿಕೊಳ್ಳುವಂತಹದ್ದಾಗಿರಲಿಲ್ಲ. ದೊಡ್ಡ ಕಾರ್ಖಾನೆಯೊಂದರ ಅಧ್ಯಕ್ಷರಾಗುತ್ತಿರುವುದು ಇದೇ ಮೊದಲ ಸಲ.

ಮುಂದಿವೆ ಸಾಲು ಸಾಲು ಸವಾಲು

ಸೂರ್ಯಕಾಂತ ನಾಗಮಾರಪಳ್ಳಿ ಅವರು ಎನ್‌ಎಸ್‌ಎಸ್‌ಕೆ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಆದರೆ ಅವರ ಮುಂದೆ ಹಲವು ಸವಾಲುಗಳಿವೆ. ನಾರಂಜಾ ಕಾರ್ಖಾನೆಯ ಮೇಲೆ ಸದ್ಯ ₹800 ಕೋಟಿಗೂ ಅಧಿಕ ಸಾಲ ಇದೆ. ಸಾಲದ ಸುಳಿಯಿಂದ ಈ ಕಾರ್ಖಾನೆಯನ್ನು ಹೊರತಂದು ಲಾಭದ ಹಳಿ ಮೇಲೆ ತರುವ ಸವಾಲು ಅವರ ಮೇಲಿದೆ. ಕಬ್ಬು ಪೂರೈಸುವ ರೈತರಿಗೂ ಸಕಾಲಕ್ಕೆ ಹಣ ಪಾವತಿಸಬೇಕಿದೆ. ಅದನ್ನವರು ಹೇಗೆ ನಿಭಾಯಿಸುತ್ತಾರೆ ಎಂಬುದು ಕಾಲವೇ ತಿಳಿಸಲಿದೆ.

ಪಕ್ಷ ಅದಲು ಬದಲು

ಗುರುಪಾದಪ್ಪ ನಾಗಮಾರಪಳ್ಳಿ ಅವರು ಜನತಾ ದಳ ಕಾಂಗ್ರೆಸ್‌ ಕೆಜೆಪಿ ಹಾಗೂ ಬಿಜೆಪಿ ಪಕ್ಷದಲ್ಲಿದ್ದರು. ಸೂರ್ಯಕಾಂತ ನಾಗಮಾರಪಳ್ಳಿ ಸಹ ಈ ಹಿಂದೆ ಬಿಜೆಪಿಯಿಂದ ಎರಡು ಸಲ ಒಂದು ಸಲ ಜೆಡಿಎಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ತಂದೆಯಂತೆ ತನ್ನದೇ ವರ್ಚಸ್ಸು ಬೆಳೆಸಿಕೊಳ್ಳಲು ಅವರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ಭದ್ರ ನೆಲೆ ಇಲ್ಲ. ಆದರೆ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ ಕಾರಣ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈಗಲೂ ಅದೇ ಪಕ್ಷದಲ್ಲಿದ್ದಾರೆ.

ಇದು ರೈತರ ಗೆಲುವು. ರೈತರ ಹಿತಕ್ಕಾಗಿ ಕೆಲಸ ಮಾಡುವೆ. ನನ್ನ ಸಹೋದರ ಉಮಾಕಾಂತ ನಾಗಮಾರಪಳ್ಳಿ ಹಾಗೂ ರೈತರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ.
–ಸೂರ್ಯಕಾಂತ, ನಾಗಮಾರಪಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.