ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಎಕಲಾರ ತಾಂಡಾ ಇಂದಿಗೂ ಸರ್ಕಾರಿ ಬಸ್ ಕಾಣದೆ ಇರುವುದರಿಂದ ಅಲ್ಲಿಯ ನಿವಾಸಿಗಳಿಗೆ ಕಾಲ್ನಡಿಗೆ ಪ್ರಯಾಣ ಅನಿವಾರ್ಯವಾಗಿದೆ.
ಬೀದರ್—ಔರಾದ್ ಮುಖ್ಯರಸ್ತೆಗೆ ಹೊಂದಿಕೊಂಡು 3 ಕಿ.ಮೀ. ದೂರದಲ್ಲಿರುವ ಈ ತಾಂಡಾದಲ್ಲಿ 100 ಮನೆಗಳಿದ್ದು, ಸುಮಾರು 800 ಜನಸಂಖ್ಯೆ ಇದೆ.
1ರಿಂದ 5ನೇ ತರಗತಿವರೆಗೆ ಸರ್ಕಾರಿ ಶಾಲೆಯೂ ಇದೆ. ಆದರೆ, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಸಂತಪೂರ, ಔರಾದ್‌ಗೆ ಹೋಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ನಿತ್ಯ ಬೆಳಿಗ್ಗೆ, ಸಂಜೆ ತಲಾ 3 ಕಿ.ಮೀ. ನಡೆಯಬೇಕಾಗಿದೆ. ಮಕ್ಕಳಿಗೆ ಮಳೆಗಾಲ, ಚಳಿಗಾಲದಲ್ಲಿ ತೊಂದರೆ ಎಂದು ತಾಂಡಾ ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.
‘ತಾಂಡಾದಲ್ಲಿ 6ರಿಂದ 8ನೇ ತರಗತಿವರೆಗೆ 25ಕ್ಕೂ ಹೆಚ್ಚು ಮಕ್ಕಳಿದ್ದಾರೆ. ನಮಗಂತೂ ನಿತ್ಯ ನಡೆದು ರೂಢಿಯಾಗಿದೆ. ಶಾಲೆಗೆ ಹೋಗಲು ಮಕ್ಕಳಿಗಾದರೂ ಒಂದು ಬಸ್ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಉಪಕಾರವಾಗುತ್ತದೆ’ ಎನ್ನುತ್ತಾರೆ ಪಾಲಕರು.
‘ಹೋರಾಟ ಮಾಡಿ ತಾಂಡಾಕ್ಕೆ ರಸ್ತೆ ಮಾಡಿಕೊಂಡಿದ್ದೇವೆ. ಬಸ್ ವ್ಯವಸ್ಥೆ ಮಾಡುವಂತೆ ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬಸ್ ಇಲ್ಲದ ಕಾರಣ ಅನೇಕ ಪಾಲಕರು ಹೆಣ್ಣು ಮಕ್ಕಳನ್ನು ಶಾಲೆ– ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದಾರೆ’ ಎಂದು ತಾಂಡಾ ನಿವಾಸಿ ಶಿವರಾಮ ರಾಠೋಡ್ ಹೇಳುತ್ತಾರೆ.
‘ನಮ್ಮ ತಾಲ್ಲೂಕಿನ ಚಟ್ನಾಳ, ಜೀರ್ಗಾ, ಎಕಲಾರ ತಾಂಡಾ ಸೇರಿದಂತೆ ಅನೇಕ ಕಡೆ ಈಗಲೂ ಸಾರಿಗೆ ಸಂಸ್ಥೆ ಬಸ್ ಸೌಲಭ್ಯ ಇಲ್ಲ. ಇರುವ ಕಡೆಯೂ ಸಮಯಕ್ಕೆ ಸರಿಯಾಗಿ ಬಸ್ ಓಡಿಸದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬೀದರ್–ಔರಾದ್ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಬಸ್ ನಿಲ್ದಾಣದ ವ್ಯವಸ್ಥೆಯೂ ಸರಿಯಾಗಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮಳೆಯಲ್ಲಿ ಬಸ್ಸಿಗಾಗಿ ಕಾಯುವಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಎಕಲಾರ ತಾಂಡಾದಲ್ಲಿ ನಿತ್ಯ ಶಾಲೆಗೆ ಹೋಗಿ–ಬರುವ ಮಕ್ಕಳ ಸಂಖ್ಯೆ ಜಾಸ್ತಿ ಇರುವುದರಿಂದ ಬಸ್ ವ್ಯವಸ್ಥೆ ಅಗತ್ಯ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇನೆಚೆನ್ನಪ್ಪ ಉಪ್ಪೆ ಅಧ್ಯಕ್ಷ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಔರಾದ್
ಒಂದು ಗ್ರಾಮಕ್ಕೆ ಬಸ್ ಓಡಿಸಬೇಕಾದರೆ ಮುಖ್ಯ ರಸ್ತೆಯಿಂದ ಕನಿಷ್ಠ 4 ಕಿ.ಮೀ. ದೂರ ಇರಬೇಕು. ಹೀಗಾಗಿ ಎಕಲಾರ ತಾಂಡಾಗೆ ಬಸ್ ಓಡಿಸಲು ಅವಕಾಶವಿಲ್ಲರಾಜಶೇಖರ ತಾಳಘಾಟಕರ್ ಘಟಕ ವ್ಯವಸ್ಥಾಪಕ ಕೆಕೆಆರ್‌ಟಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.