ADVERTISEMENT

ಕೈ ಬೆರಳಿಲ್ಲ, ಕಾಲಿಲ್ಲ; ಮೂರ್ತಿ ತಯಾರಿಕೆ ಕಲೆ ಬಲ್ಲ

ಅಂಗವಿಕಲ ಸತೀಶ ಯಮ್ಹಾನ್‌ ವಿಶಿಷ್ಟ ಸಾಧನೆ

ಮಾಣಿಕ ಆರ್ ಭುರೆ
Published 3 ಡಿಸೆಂಬರ್ 2020, 16:18 IST
Last Updated 3 ಡಿಸೆಂಬರ್ 2020, 16:18 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದ ಸತೀಶ ಯಮ್ಹಾನ್ ಸಿಮೆಂಟ್‌ನಿಂದ ಮೂರ್ತಿ ತಯಾರಿಸುತ್ತಿರುವುದು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದ ಸತೀಶ ಯಮ್ಹಾನ್ ಸಿಮೆಂಟ್‌ನಿಂದ ಮೂರ್ತಿ ತಯಾರಿಸುತ್ತಿರುವುದು   

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದ ಸತೀಶ ಯಮ್ಹಾನ್ ಅವರಿಗೆ ಎರಡೂ ಮುಂಗೈ, ಎರಡೂ ಮೊಣಕಾಲು ಕೆಳಗಿನ ಕಾಲು ಇಲ್ಲ. ಆದರೂ ಅವರು ಸುಂದರ ಮೂರ್ತಿ ತಯಾರಿಸು ವುದರಲ್ಲಿ ಸಿದ್ಧಹಸ್ತರು. ಉಪ ಜೀವನಕ್ಕೆ ಈ ಕಲೆಯೇ ಆಧಾರ ವಾಗಿದ್ದು, ವಿಶಿಷ್ಟ ಸಾಧನೆಯ ಮೂಲಕ ಸದೃಢರನ್ನೂ ಬೆರಗುಗೊಳಿಸುತ್ತಿದ್ದಾರೆ.

ಸತೀಶ ಯಮ್ಹಾನ್ ಅವರು ಬಡತನದ ಕಾರಣ ಶಾಲೆಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಆದರೂ, ಓದು ಬರಹ ಕಲಿತಿದ್ದಾರೆ. 38 ವರ್ಷದ ಇವರಿಗೆ 8 ವರ್ಷಗಳ ಹಿಂದೆ ಗ್ಯಾಂಗರಿನ್ ಆಗಿದ್ದರಿಂದ ಎರಡೂ ಮುಂಗೈ ಹಾಗೂ ಎರಡೂ ಕಾಲುಗಳ ಮೊಳಕಾಲಿನವರೆಗಿನ ಭಾಗ ಕತ್ತರಿಸಬೇಕಾಯಿತು. ಅಂಗವೈಕಲ್ಯ ದಿಂದಾಗಿ ಕೂಲಿ ಕೆಲಸಕ್ಕೂ ಹೋಗಲು ಬಾರದಾಯಿತು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದು,ಕುಟುಂಬ ನಿರ್ವಹಣೆ ಹೇಗೆಂಬ ಚಿಂತೆ ಕಾಡಿತು.

ಮನೆ ಅಂಗಳದಲ್ಲಿನ ಮಣ್ಣಲ್ಲಿ ಕೆಸರು ಮಾಡಿ ಮೂರ್ತಿ ಮಾಡು ವುದಕ್ಕೆ ಬರುತ್ತದೆಯೇ ಎಂದು ಹತ್ತಾರು ಸಲ ಪ್ರಯತ್ನಿಸಿದರು. ಸತತವಾಗಿ ಶ್ರಮಿಸಿದ್ದರಿಂದ ಈ ಕಾರ್ಯದಲ್ಲಿ ಯಶಸ್ಸು ದೊರಕಿತು.

ADVERTISEMENT

ಅಂಗವಿಕಲನಾದರೂ ಮಣ್ಣಿನಲ್ಲಿ ಸುಂದರ ಮೂರ್ತಿ ಮಾಡಿರುವುದನ್ನು ನೋಡಿ ಅನೇಕರು ಖುಷಿಪಟ್ಟರು. ವಿಶಿಷ್ಟ ಸಾಧನೆಗೆ ಬೆನ್ನುತಟ್ಟಿಧನಸಹಾಯ ಕೂಡ ಮಾಡಿದರು. ಮೊದ ಮೊದಲು ಯಾರನ್ನೂ ವಿಚಾರಿಸದೆ ಮೂರ್ತಿ ಮಾಡಿ ಸಂಬಂಧಿಸಿದವರ ಎದುರು ಇಟ್ಟಾಗ ಯಾರೂ ವಿರೋಧ ವ್ಯಕ್ತಪಡಿಸದೆ ಕೌತುಕದ ಮಾತುಗಳನ್ನಾಡಿ ಹಣ ನೀಡಿ ಖರೀದಿಸಿದರು. ಹೀಗೆ ದೊರೆತ ಪ್ರೋತ್ಸಾಹದಿಂದಾಗಿ ಇವರು ಮೂರ್ತಿ ತಯಾರಿಕೆಯನ್ನೇ ಕಾಯಕ ಮಾಡಿ ಕೊಂಡರು. ಈ ಕಾರಣ ಈಗ ಮೂರ್ತಿ ತಯಾರಿಕೆ ಯಲ್ಲಿ ಸಿದ್ಧಹಸ್ತರಾಗಿದ್ದು ವಿವಿಧ ಮೂರ್ತಿ ಗಳನ್ನು ತಯಾರಿಸಿ ಕೊಡುವಂತೆ ಅನೇಕರು ಇವರ ಮನೆಗೆ ಬಂದು ಕೇಳುತ್ತಿದ್ದಾರೆ.

‘ಲಿಂ.ಚೆನ್ನಬಸವ ಶಿವಯೋಗಿ, ಗೌತಮ ಬುದ್ಧ, ವೇದಮೂರ್ತಿ ಕರಬಸಯ್ಯಸ್ವಾಮಿ, ಬೇಲೂರ ಶಿವಲಿಂಗೇಶ್ವರ ಶಿವಯೋಗಿ, ಡಾ.ಅಂಬೇಡ್ಕರ್ ಮೊದಲಾದವರ 25ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿ ಕೊಟ್ಟಿದ್ದೇನೆ. ಸಿಮೆಂಟ್ ಕಾಂಕ್ರಿಟ್‌ನಲ್ಲಿ ಕಬ್ಬಿಣದ ತಂತಿ ಅಳವಡಿಸಿ ಮೂರ್ತಿ ತಯಾರಿಸುತ್ತೇನೆ. ಇಂಥ ಮೂರ್ತಿಗಳಿಗೆ ಬೇರೆ ಕಡೆ ಸಾವಿರಾರು ರೂಪಾಯಿ ಹಣ ಪಡೆಯುತ್ತಾರೆ. ಆದರೆ, ನನಗೆ ಇದುವರೆಗೆ ಒಂದು ಮೂರ್ತಿಗೆ ಹೆಚ್ಚೆಂದರೂ ₹5 ಸಾವಿರ ದೊರಕಿದೆ’ ಎಂದು ಸತೀಶ ಹೇಳುತ್ತಾರೆ.

‘ಈ ಕಾಯಕ ದಿಂದ ಕುಟುಂಬ ನಿರ್ವಹಣೆ ಸಾಧ್ಯವಾಗಿದೆ. ಕೊರೊನಾ ಲಾಕ್‌ಡೌನ್‌ನಲ್ಲಿ ಪುತ್ರಿಯ ವಿವಾಹವೂ ಮಾಡಿದ್ದೇನೆ. ಇನ್ನಿಬ್ಬರು ಮಕ್ಕಳು ಪ್ರೌಢಶಾಲೆ ಶಿಕ್ಷಣ ಪಡೆಯುತ್ತಿದ್ದಾರೆ. ಈ ಕಾರ್ಯಕ್ಕಾಗಿ ಹಾರಕೂಡ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸನ್ಮಾನಿಸಿ ಧನಸಹಾಯ ಮಾಡಿದ್ದಾರೆ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ’ ಎಂದು ಧನ್ಯತಾ ಭಾವದಿಂದ ವಿವರಿಸುತ್ತಾರೆ.

‘ಸರ್ಕಾರದಿಂದ ಆಶ್ರಯ ಮನೆ ಬಿಟ್ಟರೆ ಟ್ರೈಸಿಕಲ್‌ ಆಗಲಿ, ಸ್ಕೂಟರ್ ಆಗಲಿ ದೊರಕಿಲ್ಲ. ಈ ಬಗ್ಗೆ ಅನೇಕ ಸಲ ಅರ್ಜಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಜಿಲ್ಲೆಗೆ ಒಳ್ಳೆಯ ಅಧಿಕಾರಿ ಗಳು ಬಂದರೆ ನನಗೂ ಟ್ರೈಸಿಕಲ್‌ ದೊರೆ ಯಬಹುದು’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.