ADVERTISEMENT

ಅಪೌಷ್ಟಿಕತೆ ನಿವಾರಣೆಗೆ ಮಕ್ಕಳಿಗೆ ‘ಪುಷ್ಠಿ ನ್ಯೂಟ್ರಿಮಿಕ್ಸ್’

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಪ್ರಶ್ನೆಗೆ ಸಚಿವೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 14:55 IST
Last Updated 5 ಮಾರ್ಚ್ 2021, 14:55 IST

ಬೀದರ್: ಅಪೌಷ್ಟಿಕತೆ ನಿವಾರಣೆಗೆ ಬೀದರ್ ಜಿಲ್ಲೆಯ ಅಂಗನವಾಡಿ ಕೇಂದ್ರಗಳ 6 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳಿಗೆ ಪುಷ್ಠಿ ನ್ಯೂಟ್ರಿಮಿಕ್ಸ್ ಪೂರಕ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
₹ 8 ರ ಘಟಕ ವೆಚ್ಚದಲ್ಲಿ ಹೆಸರು ಬೇಳೆ, ಶೇಂಗಾ ಬೀಜ, ಹೆಸರು ಕಾಳು, ಅಲಸಂದೆಕಾಳು, ತೊಗರಿ ಬೇಳೆ, ಒಣ ಮೆಣಸಿನಕಾಯಿ, ಕಡಲೆಬೇಳೆ, ಬೆಲ್ಲ, ಸಕ್ಕರೆ, ಸಾಂಬಾರು ಪೌಡರ್, ಅಯೋಡಿನ್‍ಯುಕ್ತ ಉಪ್ಪು, ಅಕ್ಕಿ, ಗೋಧಿ, ಎಣ್ಣೆ, ಹಾಲು ಹಾಗೂ ಕೋಳಿ ಮೊಟ್ಟಿಯನ್ನು ಮಕ್ಕಳ ಮನೆ ಬಾಗಿಲಿಗೆ ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಬೀದರ್ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಸಾಮಾನ್ಯ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕೆ ಪ್ರತಿ ದಿನ ₹ 8 ರ ವೆಚ್ಚ ಭರಿಸಲಾಗುತ್ತಿದೆ. ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ₹ 12ರ ಪೂರಕ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

3 ರಿಂದ 6 ವರ್ಷದ ಎಲ್ಲ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ಕೊಡಲಾಗುತ್ತಿದೆ. 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳಿಗೆ ವಾರದಲ್ಲಿ 5 ದಿನ 150 ಎಂ.ಎಲ್. ಕೆನೆಭರಿತ ಹಾಲು ನೀಡಲಾಗುತ್ತಿದೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ಹೆಚ್ಚುವರಿಯಾಗಿ ವಾರದಲ್ಲಿ 3 ದಿನ ಮೊಟ್ಟೆ ಹಾಗೂ 200 ಎಂ.ಎಲ್. ಹಾಲು, ಮೊಟ್ಟೆ ಉಪಯೋಗಿಸದ ಮಕ್ಕಳಿಗೆ ವಾರದಲ್ಲಿ 200 ಎಂ.ಎಲ್. ಹಾಲು ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್ 19 ಕಾರಣ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳ ಮನೆ ಬಾಗಿಲಿಗೆ ಕಚ್ಚಾ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೀದರ್ ಜಿಲ್ಲೆಗೆ ಒಟ್ಟು 1,893 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, ಈ ಪೈಕಿ 1,301 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ನಿವೇಶನ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸದನದಲ್ಲಿ ಗಮನ ಸೆಳೆದ ವಿಜಯಸಿಂಗ್: ಬೀದರ್ ಜಿಲ್ಲೆಯಲ್ಲಿ ಬಹಳಷ್ಟು ಮಕ್ಕಳು ಹಾಗೂ ಗರ್ಭಿಣಿಯರು ಅಪೌಷ್ಟಿಕತೆ ಎದುರಿಸುತ್ತಿರುವುದರ ಮೇಲೆ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ವಿಧಾನಸಭೆಯಲ್ಲಿ ಬೆಳಕು ಚೆಲ್ಲಿದರು.

ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಲು ಪ್ರತಿ ವರ್ಷ ಅಧಿಕ ಅನುದಾನ ಕೊಡಲಾಗುತ್ತಿದೆ. ಆದರೂ, ಅಪೌಷ್ಟಿಕತೆ ನಿವಾರಣೆಯಾಗಿಲ್ಲ. ಬಹಳಷ್ಟು ಮಕ್ಕಳು ಹಾಗೂ ಗರ್ಭಿಣಿಯರು ರಕ್ತಹೀನತೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸದನದ ಗಮನ ಸೆಳೆದರು. ಪೌಷ್ಟಿಕ ಆಹಾರ ಒದಗಿಸುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.