ADVERTISEMENT

ಬಸವಣ್ಣನ ತತ್ವ, ಸಿದ್ಧಾಂತ ಆಚರಣೆಗೆ ಬರಲಿ: ಇಳಕಲ್‌ನ ಗುರುಮಹಾಂತ ಸ್ವಾಮೀಜಿ ನುಡಿ

​ಪ್ರಜಾವಾಣಿ ವಾರ್ತೆ
Published 6 ಮೇ 2019, 14:24 IST
Last Updated 6 ಮೇ 2019, 14:24 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ನಡೆದ ಬಸವ ಜಯಂತಿ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ, ಬಸವಲಿಂಗ ಪಟ್ಟದ್ದೇವರು ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಹಾಗೂ ಶಿವಾನಂದ ಸ್ವಾಮೀಜಿ ಅವರು ಜಂಟಿಯಾಗಿ ಕಿರುಪುಸ್ತಿಕೆ ಬಿಡುಗಡೆ ಮಾಡಿದರು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಭಾನುವಾರ ನಡೆದ ಬಸವ ಜಯಂತಿ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ, ಬಸವಲಿಂಗ ಪಟ್ಟದ್ದೇವರು ಇಳಕಲ್‌ನ ಗುರುಮಹಾಂತ ಸ್ವಾಮೀಜಿ ಹಾಗೂ ಶಿವಾನಂದ ಸ್ವಾಮೀಜಿ ಅವರು ಜಂಟಿಯಾಗಿ ಕಿರುಪುಸ್ತಿಕೆ ಬಿಡುಗಡೆ ಮಾಡಿದರು   

ಬೀದರ್: ‘ನಮ್ಮ ಮನೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಜಾಗ ನೀಡಿದರೆ ಸಾಲದು, ಅವರ ಆಚಾರ, ವಿಚಾರಗಳನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಇಳಕಲ್‌ನ ಗುರುಮಹಾಂತ ಸ್ವಾಮೀಜಿ ನುಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಆಯೋಜಿಸಿರುವ ಬಸವ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿಶ್ವವೇ ಬಸವಣ್ಣನ ಆಚಾರ, ವಿಚಾರಗಳನ್ನು ಕೊಂಡಾಡುತ್ತಿದೆ. ಬಸವಣ್ಣನ ಅನುಯಾಯಿಗಳಾದ ನಾವು ಪಂಚಾಂಗ , ಜೋತಿಷ್ಯ ಕೇಳಿ ಕಾಲಹರಣ ಮಾಡುತ್ತಿದ್ದೇವೆ. ಮನೆಯಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಜಾಗ ನೀಡಿದ್ದೇವೆಯೇ ಹೊರತು ಅವರ ಆಚಾರ, ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅಂತರಂಗದಲ್ಲಿರುವ ದೇವರನ್ನು ಕಾಣುವ, ಅನುಭವಿಸುವ ಮಾರ್ಗವನ್ನು ಬಸವಣ್ಣನವರು ನಮಗೆ ಇಷ್ಟಲಿಂಗದ ಮೂಲಕ ನೀಡಿದ್ದಾರೆ. ಆದರೆ ಬಸವಣ್ಣ ನೀಡಿದ ಈ ಅಮೂಲ್ಯವಾದ ಇಷ್ಟಲಿಂಗವನ್ನು ನಾವು ಇಂದಿಗೂ ಅರ್ಥ ಮಾಡಿಕೊಂಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಇಷ್ಟಲಿಂಗ ಕಟ್ಟಿಕೊಂಡ ಮೇಲೆ ಗುಡಿ ಗುಂಡಾರಕ್ಕೆ ಹೋಗುವುದು, ಪಂಚಾಂಗ, ಜೋತಿಷ್ಯಗಳ ಮೊರೆ ಹೋಗುವುದು ಎಷ್ಟರ ಮಟ್ಟಿಗೆ ಸರಿ. ಇದು ಬಸವಣ್ಣನವರಿಗೆ ಮಾಡುವ ಅಪಮಾನವಾಗಿದೆ’ ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಹಾಗೂ ಸಾಹಿತಿ ಡಾ.ಸಿ.ವೀರಣ್ಣ ಮಾತನಾಡಿದರು. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮೀಜಿ ನೇತೃತ್ವ ವಹಿಸಿದ್ದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಸಂಸದ ಭಗವಂತ ಖೂಬಾ, ಶಿವಶರಣಪ್ಪ ಪಾಟೀಲ, ಚಂದ್ರಶೇಖರ ಪಾಟೀಲ ಗಾದಗಿ, ಬಿ.ಜಿ.ಶೆಟಕಾರ, ಗುರುನಾಥ ಕೊಳ್ಳೂರ, ಶಂಕರೆಪ್ಪ ಹೊನ್ನಾ, ವೈಜಿನಾಥ ಕಮಠಾಣೆ, ಚಂದ್ರಶೇಖರ ಹೆಬ್ಬಾಳೆ, ಶಕುಂತಲಾ ವಾಲಿ, ಪಂಪಾವತಿ ಪಾಟೀಲ, ಶರಣಪ್ಪ ಮಿಠಾರೆ, ಬಾಬು ವಾಲಿ ಇದ್ದರು.

ಬಸವಕೇಂದ್ರದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.