ADVERTISEMENT

ಬೀದರ್: ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಜ್ಜು

ಇಂದಿನಿಂದ ಆಫ್‌ಲೈನ್‌ ತರಗತಿಗಳು ಆರಂಭ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 19:30 IST
Last Updated 24 ಅಕ್ಟೋಬರ್ 2021, 19:30 IST
ಬೀದರ್‌ ತಾಲ್ಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸ್ಯಾನಿಟೈಸ್‌ ಮಾಡಲಾಯಿತು
ಬೀದರ್‌ ತಾಲ್ಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸ್ಯಾನಿಟೈಸ್‌ ಮಾಡಲಾಯಿತು   

ಬೀದರ್: ಕೋವಿಡ್‌ ಕಾರಣ ಮುಚ್ಚಲಾಗಿದ್ದ 1ರಿಂದ 5ನೇ ತರಗತಿ ಶಾಲೆಗಳು ಅಕ್ಟೋಬರ್ 25ರಿಂದ ಪ್ರಾರಂಭವಾಗಲಿವೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಶೇಕಡ 50ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿದೆ. ಮೊದಲ ಹಂತದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಇನ್ನುಳಿದ ಎರಡು ದಿನ ಸ್ವಚ್ಛತಾ ಕಾರ್ಯ ಹಾಗೂ ಸ್ಯಾನಿಟೈಸರ್‌ ಮಾಡಲು ನಿರ್ಧರಿಸಲಾಗಿದೆ. ರಾಜ್ಯೋತ್ಸವದ ನಂತರ ಪೂರ್ತಿ ದಿನ ತರಗತಿಗಳು ನಡೆಯಲಿವೆ.

‘ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಸರ್ಕಾರದ ನಿರ್ದೇಶನದಂತೆ ಆನ್‌ಲೈನ್‌ ಹಾಗೂ ಆಫ್‌ ಲೈನ್‌ ಎರಡೂ ತರಗತಿಗೂ ಅವಕಾಶ ನೀಡಲಾಗಿದೆ. ಎರಡು ಡೋಸ್‌ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ತಿಳಿಸಿದರು.

ADVERTISEMENT

‘ಸರ್ಕಾರದ ಆದೇಶದಂತೆ ಶನಿವಾರವೇ ಎಲ್ಲ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಸ್ಯಾನಿಟೈಸ್ ಸಹ ಮಾಡಲಾಗಿದೆ’ ಎಂದು ಭಾಲ್ಕಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎಸ್‌.ಮನೋಹರ ಹೇಳಿದರು.

ಬೀದರ್ ಜಿಲ್ಲೆಯಲ್ಲಿ 507 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 667 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು,
21 ಖಾಸಗಿ ಕಿರಿಯ ಪ್ರಾಥಮಿಕ ಶಾಲೆಗಳು, 17 ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 38 ಅನುದಾನ ರಹಿತ ಶಾಲೆಗಳು ಇವೆ.

ನಗರದ ನಾವದಗೇರಿ, ಪ್ರತಾಪನಗರ, ನೌಬಾದ್, ಮೈಲೂರ್ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶನಿವಾರ ಸ್ವಚ್ಛತೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಮಕ್ಕಳನ್ನ ಬರ ಮಾಡಿಕೊಳ್ಳಲು ಶಾಲೆಗಳು ಸಜ್ಜಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.