ADVERTISEMENT

ಈರುಳ್ಳಿ ಬೆಲೆ ಮತ್ತೆ ₹100

ಚಂದ್ರಕಾಂತ ಮಸಾನಿ
Published 27 ಡಿಸೆಂಬರ್ 2019, 19:45 IST
Last Updated 27 ಡಿಸೆಂಬರ್ 2019, 19:45 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಈರುಳ್ಳಿ ಬೆಲೆಯ ಮೇಲೆಯೇ ಗ್ರಾಹಕರ ಚಿತ್ತ ನೆಟ್ಟಿದೆ. ಬೆಲೆಯ ಕಾರಣಕ್ಕೆ ನಗರದ ಮಾರುಕಟ್ಟೆಯಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ಈರುಳ್ಳಿ ಬೆಲೆ ಈ ವಾರ ಮತ್ತೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ. ಬೆಳ್ಳುಳ್ಳಿ ಬೆಲೆ ಕ್ವಿಂಟಲ್‌ಗೆ ₹20 ಸಾವಿರಕ್ಕಿಂತ ಕಡಿಮೆಯಾಗಿಲ್ಲ.

ಬೆಳಗಾವಿ, ಧಾರವಾಡ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆದಿದ್ದರೂ ಸರಕು ಸಾಗಣೆ ವೆಚ್ಚವೇ ಅಧಿಕವಾಗುತ್ತಿರುವ ಕಾರಣ ಜಿಲ್ಲೆಯ ಜನ ಮಹಾರಾಷ್ಟ್ರದ ಸೋಲ್ಲಾಪುರದ ಈರುಳ್ಳಿಯನ್ನೇ ಅವಲಂಬಿಸಬೇಕಾಗಿದೆ. ಅಲ್ಲಿನ ರೈತರಿಗೆ ಹೆಚ್ಚಿನ ಆದಾಯ ದೊರಕದಿದ್ದರೂ ವ್ಯಾಪಾರಿಗಳು ಅಭಾವ ಸೃಷ್ಟಿಸಿ ಹಣ ಮಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಹಸಿ ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500, ಆಲೂಗಡ್ಡೆ ಹಾಗೂ ಕರಿಬೇವು ಬೆಲೆಯಲ್ಲಿ ₹ 1 ಸಾವಿರ ಹೆಚ್ಚಳವಾಗಿದೆ. ಎಲೆಕೋಸು, ಗಜ್ಜರಿ, ಬೀಟ್‌ರೂಟ್, ಬದನೆಕಾಯಿ, ಮೆಂತೆಸೊಪ್ಪು, ಸಬ್ಬಸಗಿ, ಕೊತಂಬರಿ ಬೆಲೆ ಸ್ಥಿರವಾಗಿದೆ.

ADVERTISEMENT

ಬೀನ್ಸ್, ಹೂಕೋಸು, ಬೆಂಡೆಕಾಯಿ, ಹಿರೇಕಾಯಿ ಬೆಲೆ ₹ 1 ಸಾವಿರ, ಟೊಮೆಟೊ, ಪಾಲಕ್‌ ಬೆಲೆ ₹ 500 ಹಾಗೂ ನುಗ್ಗೆಕಾಯಿ ಬೆಲೆ ₹ 300 ಕಡಿಮೆಯಾಗಿದೆ.

ಎಳ್ಳ ಅಮಾವಾಸ್ಯೆಯ ಸಂದರ್ಭದಲ್ಲಿ ತರಕಾರಿಗೆ ಉತ್ತಮ ಬೆಲೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಚೆನ್ನಾಗಿ ಸೊಪ್ಪು ಬೆಳೆದಿದ್ದರು. ಕಂಕಣ ಸೂರ್ಯಗ್ರಹಣ ಬಂದ ಕಾರಣ ಜನರು ಒಂದೇ ದಿನ ಹಬ್ಬ ಆಚರಿಸಲಿಲ್ಲ. ಕೆಲವರು ಒಂದು ದಿನ ಮೊದಲೇ ಹಬ್ಬ ಆಚರಿಸಿದರೆ, ಇನ್ನು ಕೆಲವರು ಶುಕ್ರವಾರ ಸಾಂಕೇತಿಕವಾಗಿ ಭೂತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಹೀಗಾಗಿ ನಿರೀಕ್ಷೆಯ ಪ್ರಮಾಣದಲ್ಲಿ ಆದಾಯ ರೈತರ ಕೈಗೆ ಸೇರಿಲ್ಲ.

ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಉತ್ತರಪ್ರದೇಶದ ಆಗ್ರಾದಿಂದ ಆಲೂಗಡ್ಡೆ, ತೆಲಂಗಾಣದ ಹೈದರಾಬಾದ್‌ನಿಂದ ಮೆಣಸಿನಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ, ಟೊಮೆಟೊ ಹಾಗೂ ಮಹಾರಾಷ್ಟ್ರದ ಸೋಲಾಪೂರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ.

ಜಿಲ್ಲೆಯ ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಬದನೆಕಾಯಿ, ಹಿರೇಕಾಯಿ, ಕೊತಂಬರಿ, ಕರಿಬೇವು, ಮೆಂತೆಸೊಪ್ಪು ಬಂದಿದೆ ಎಂದು ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.