
ಬೀದರ್: ನಗರದ ಪಾಪನಾಶ ಶಿವಲಿಂಗ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ವಿಷಯ ಈಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಕೇಂದ್ರದ ಮಾಜಿಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ನಡುವಿನ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ.
‘2024ರ ಮಾರ್ಚ್ 7ರಂದು ಕಾಮಗಾರಿಗೆ ಪ್ರಧಾನಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶನಿವಾರ (ಫೆ.7) ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಜಾಣ್ಮೆಯ ಪತ್ರಿಕಾ ಪ್ರಕಟಣೆ ಹೊರಡಿಸಿ ಸೂಕ್ಷ್ಮವಾಗಿ ನಡೆದುಕೊಂಡಿದ್ದಾರೆ.
ಈ ವಿಷಯ ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ. ಆದರೆ, ಆ ಪಕ್ಷ ಅಷ್ಟಕ್ಕೆ ಸುಮ್ಮನಾಗಿಲ್ಲ. ಸರ್ಕಾರಿ ಕಾರ್ಯಕ್ರಮಕ್ಕೂ ಮುಂಚೆಯೇ ಪಾಪನಾಶ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗ ಇದೇ ವಿಷಯ ಜಿಲ್ಲಾ ಆಡಳಿತ ಹಾಗೂ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಕಾಂಗ್ರೆಸ್ ಕೂಡ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ಪಾಪನಾಶಿಗೆ ಕರೆತರಲು ಯೋಜನೆ ರೂಪಿಸಿದೆ. ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಹೀಗಾಗಿಯೇ ಇಡೀ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪಾಪನಾಶ ಸುತ್ತ ನಿಯೋಜಿಸಿ, ಸರ್ಪಗಾವಲು ಹಾಕಲು ನಿರ್ಧರಿಸಿದೆ ಎಂದು ಖಚಿತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಈ ಸಂಬಂಧ ‘ಪ್ರಜಾವಾಣಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಕೇಂದ್ರ ಸರ್ಕಾರದ ‘ಪ್ರಸಾದ’ ಯೋಜನೆಯಡಿ ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹22.41 ಕೋಟಿ ಅನುದಾನ ಮಂಜೂರಾಗಿದೆ. ಇದರ ಕಾಮಗಾರಿಗೆ ಬೆಳಿಗ್ಗೆ 11ಕ್ಕೆ ಸಚಿವ ಈಶ್ವರ ಬಿ. ಖಂಡ್ರೆ ಚಾಲನೆ ನೀಡಬೇಕಿದೆ. ಆದರೆ, ಅದಕ್ಕೂ ಮುನ್ನವೇ ಜಿಲ್ಲಾ ಬಿಜೆಪಿ ಪಾಪನಾಶಿನಿಯಲ್ಲಿ ಪೂಜೆ ಹಮ್ಮಿಕೊಂಡಿದೆ.
ಎರಡೂ ಕಡೆಯವರು ಒಂದೇ ಸಲ ಒಂದೇ ಸ್ಥಳದಲ್ಲಿ ಸೇರಿದರೆ ಜಟಾಪಟಿ ನಡೆದು, ಕಾನೂನು ಸುವ್ಯವಸ್ಥೆ ಹೆದಗೆಡುವ ಹೆಚ್ಚಿನ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ಜಿಲ್ಲಾಡಳಿತವು, ಸರ್ಕಾರಿ ಕಾರ್ಯಕ್ರಮ ಮುಗಿದ ನಂತರ ಬಿಜೆಪಿಯವರು ಪೂಜೆ ಮಾಡಿಕೊಳ್ಳಬೇಕೆಂದು ತಿಳಿಸಿದೆ. ಆದರೆ, ಬಿಜೆಪಿ ಮುಖಂಡರು ಇದಕ್ಕೆ ಒಪ್ಪಿಕೊಂಡಿಲ್ಲ ಎಂದು ಗೊತ್ತಾಗಿದೆ. ಹೀಗಾಗಿಯೇ ಎಲ್ಲರ ಚಿತ್ತ ಈಗ ಶನಿವಾರ ನಡೆಯಲಿರುವ ಕಾರ್ಯಕ್ರಮದತ್ತ ನೆಟ್ಟಿದೆ.
2024ರ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪುನಃ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿಗೆ ಅಪಮಾನ ಮಾಡುವುದು ಸರಿಯಲ್ಲ ಎನ್ನುವುದು ಬಿಜೆಪಿಯ ವಾದ. ಆದರೆ, ಸಂಸದ ಸಾಗರ ಖಂಡ್ರೆ ಅವರ ಪ್ರಯತ್ನದಿಂದ ಈ ಕೆಲಸ ಆಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿಕೊಂಡಿದ್ದಾರೆ. ‘ಇದು ಶಂಕುಸ್ಥಾಪನೆಯಲ್ಲ, ಕಾಮಗಾರಿಗೆ ಚಾಲನೆ ಕೊಡುವ ಕಾರ್ಯಕ್ರಮ’ ಎಂದು ಜಿಲ್ಲಾಡಳಿತ ಸ್ಪಷ್ಟೀಕರಣ ನೀಡಿದೆ.
ಬಿಜೆಪಿ ಪಕ್ಷದ ವತಿಯಿಂದ ಈಗಾಗಲೇ ನಿರ್ಧರಿಸಿದಂತೆ ಪಾಪನಾಶ ದೇವಸ್ಥಾನದಲ್ಲಿ ಶನಿವಾರ (ಫೆ.7) ಬೆಳಿಗ್ಗೆ ಪೂಜೆ ನೆರವೇರಿಸಲಾಗುವುದು.ಭಗವಂತ ಖೂಬಾ ಕೇಂದ್ರದ ಮಾಜಿಸಚಿವ
ಬ್ಯಾನರ್ ಹರಿದ ಆರೋಪ ‘
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಷ್ಟೊಂದು ನೀಚ ರಾಜಕಾರಣ ಏಕೆ ಮಾಡುತ್ತಿದ್ದಾರೆ. ಬೀದರ್‌ನಲ್ಲಿ ನನಗೆ ಸಂಬಂಧಿಸಿದ ಬ್ಯಾನರ್ ಹರಿದು ಬಳ್ಳಾರಿ ಬ್ಯಾನರ್ ಘಟನೆ ಪುನರಾವರ್ತಿಸುವ ಹುನ್ನಾರ ಏನಾದರೂ ನಡೆಸಿದ್ದಾರಾ? ಪ್ರಿಂಟಿಂಗ್ ಪ್ರೆಸ್‌ನವರಿಗೆ ನಮ್ಮ ಬ್ಯಾನರ್ ಹಾಕದಂತೆ ಹೆದರಿಸಿದ್ದಾರೆ.
ನೋಟಿಸ್ ಕೊಡಿಸಿ ಚಿಲ್ಲರೆ ರಾಜಕಾರಣ ಏಕೆ ಮಾಡುತ್ತಿದ್ದಾರೆ. ಸತ್ಯ ಮರೆಮಾಚಲು ಸಾಧ್ಯವಿಲ್ಲ. ಬ್ಯಾನರ್ ಹರಿದು ಜಗಳ ಹಚ್ಚುವ ಕೆಲಸ ಮಾಡಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಪಾಪನಾಶ ಅಭಿವೃದ್ಧಿಯ ಶ್ರೇಯ ಪಡೆಯಬೇಕೆಂದು ಬಿಜೆಪಿ ಹಾಗೂ ಕಾಂಗ್ರೆಸ್‌ನವರು ಹಟಕ್ಕೆ ಬಿದ್ದವರಂತೆ ನಗರದಾದ್ಯಂತ ಬ್ಯಾನರ್‌ಗಳನ್ನು ಹಾಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.