ADVERTISEMENT

ಬೀದರ್ | ಪಾಲಕರು ಮಕ್ಕಳಿಗೆ ಆದರ್ಶರಾಗಿ: ಡಾ.ಗುರುರಾಜ ಕರಜಗಿ

ಜನಸೇವಾ ಶಾಲೆಯಲ್ಲಿ ‘ನಮ್ಮ ಮನೆ–ನಮ್ಮ ಮಕ್ಕಳು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 6:03 IST
Last Updated 19 ನವೆಂಬರ್ 2022, 6:03 IST
ಬೀದರ್‌ನ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಮನೆ-–ನಮ್ಮ ಮಕ್ಕಳು’ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿದರು
ಬೀದರ್‌ನ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಮನೆ-–ನಮ್ಮ ಮಕ್ಕಳು’ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿದರು   

ಬೀದರ್: ಪಾಲಕರು ಮಕ್ಕಳಿಗೆ ಆದರ್ಶಪ್ರಾಯರಾಗಿರಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಕಿವಿಮಾತು ಹೇಳಿದರು.

ವಿಕಾಸ ಅಕಾಡೆಮಿ ಸಹಯೋಗದಲ್ಲಿ ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ನಮ್ಮ ಮನೆ–ನಮ್ಮ ಮಕ್ಕಳು’ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಪ್ರತಿ ವಿಷಯದಲ್ಲೂ ಪಾಲಕರನ್ನೇ ಅನುಕರಿಸುತ್ತಾರೆ. ಹೀಗಾಗಿ ಪಾಲಕರ ನಡೆ, ನುಡಿ ಮಾದರಿಯಾಗಿರಬೇಕು ಎಂದು ತಿಳಿಸಿದರು.

ADVERTISEMENT

ಮಕ್ಕಳನ್ನು ಅತಿಯಾಗಿ ಪ್ರೀತಿಸುವುದು ಹಾಗೂ ಅವರತ್ತ ಲಕ್ಷ್ಯ ವಹಿಸದೇ ಇರುವುದು ಒಳ್ಳೆಯ ಬೆಳವಣಿಗೆಯಲ್ಲ. ಪಾಲಕರು ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.

ಮಗು ಯಾವುದಾದರೂ ವಸ್ತು ಕದ್ದು ತಂದಿದ್ದರೆ ಖುಷಿಪಡಬಾರದು. ಹಾಗೆ ಮಾಡಿದ್ದಲ್ಲಿ ಆ ಮಗು ಮುಂದೊಂದು ದಿನ ಕಳ್ಳನಾಗುತ್ತಾನೆ. ಸಮಾಜಕ್ಕೆ ಕಂಟಕವೂ ಆಗುತ್ತಾನೆ. ಕಾರಣ, ಮಕ್ಕಳು ತಪ್ಪು ಮಾಡಿದಾಗ, ತಿದ್ದಿ ಸರಿದಾರಿಗೆ ತರಬೇಕು. ಮಕ್ಕಳನ್ನು ಉತ್ತಮ ಪ್ರಜೆಯಾಗಿ ಬೆಳೆಸುವ ಹೊಣೆಗಾರಿಕೆ ಪಾಲಕರದ್ದಾಗಿದೆ ಎಂದು ತಿಳಿಸಿದರು.

ಮನೆಯೇ ಮೊದಲ ಪಾಠ ಶಾಲೆ. ಜನನಿಯೇ ಮೊದಲ ಗುರು. ಕಲ್ಲು, ಇಟ್ಟಿಗೆಯಿಂದ ಕಟ್ಟಿದ ಮನೆ ಕೇವಲ ಮನೆಯಾಗುತ್ತದೆ. ಶಿಸ್ತು, ಪ್ರೀತಿ, ವಿಶ್ವಾಸ ಇರುವ ಮನೆ ಸುಂದರ ಮನೆ ಎನಿಸಿಕೊಳ್ಳುತ್ತದೆ ಎಂದು ಹೇಳಿದರು.

ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಮಕ್ಕಳು ಹಾಗೂ ಪಾಲಕರು ಗುರುವಿಗೆ ಗೌರವ ಕೊಡಬೇಕು ಎಂದು ನುಡಿದರು.

ಪಾಲಕರು ಮಕ್ಕಳಿಗಾಗಿ ಹಣ, ಸಂಪತ್ತು ಮಾಡದೆ, ಉತ್ತಮ ಸಂಸ್ಕಾರದೊಂದಿಗೆ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ತಂದೆ-ತಾಯಿ ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಬೇಕು. ಅವರಲ್ಲಿ ಕೀಳರಿಮೆ ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಡಾ.ಎಸ್. ಬಲಬೀರಸಿಂಗ್, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತೆ ಅಕ್ಕ ಅನ್ನಪೂರ್ಣ ಹಾಗೂ ಡಾ.ಎಸ್.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಜನ ಸೇವಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ಗ್ಲೊಬಲ್ ಸೈನಿಕ ಅಕಾಡೆಮಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ, ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ, ಖಜಾಂಚಿ ಶಿವರಾಜ ಹುಡೇದ್, ಆಡಳಿತ ಮಂಡಳಿ ಸದಸ್ಯ ಶಿವಲಿಂಗಪ್ಪ ಜಲಾದೆ, ಆಡಳಿತಾಧಿಕಾರಿ ಸೌಭಾಗ್ಯವತಿ ಇದ್ದರು. ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಾನಂದ ಮಲ್ಲ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.