ಪಿಂಚಣಿ
ಐ ಸ್ಟಾಕ್ ಚಿತ್ರ
ಹುಲಸೂರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಸಾಮಾಜಿಕ ಭದ್ರತಾ ಯೋಜನೆಗಳು ನಿಜವಾದ ಬಡವರ ಕೈಗೆ ತಲುಪದೆ ಅನರ್ಹರು, ಮಧ್ಯವರ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಪಾಲಾಗುತ್ತಿದ್ದು, ಸೌಲಭ್ಯಗಳ ದುರುಪಯೋಗವಾಗುತ್ತಿದೆ ಎಂಬ ಆರೋಪ ಕೇಳಿದೆ. ಇದು ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಕಂದಾಯ ಇಲಾಖೆ ಸರಿಯಾದ ಪರಿಶೀಲನೆ ನಡೆಸದ ಪರಿಣಾಮ ಸರ್ಕಾರದ ಕೋಟ್ಯಂತರ ರೂಪಾಯಿ ಅನರ್ಹರ ಖಾತೆಗೆ ಜಾರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರಾಜ್ಯದ ಅನೇಕ ಯೋಜನೆಗಳು ತಮ್ಮ ಗುರಿಯನ್ನು ತಪ್ಪಿವೆ ಎಂಬ ಆರೋಪ ಮುಂದುವರಿದಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಪರಿಶೀಲನೆ ಶಿಥಿಲಗೊಂಡಿದ್ದು ನಕಲಿ ದಾಖಲೆಗಳು, ಮಧ್ಯವರ್ತಿಗಳ ಪ್ರಭಾವ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಹಾಯಕರಿಗೆ ಇರಬೇಕಿದ್ದ ನೆರವು ಅನರ್ಹರಿಗೆ ಸಿಕ್ಕಿದೆ ಎಂದು ಫಲಾನುಭವಿಗಳು ವಾದಿಸುತ್ತಿದ್ದಾರೆ.
60 ರಿಂದ 65 ವರ್ಷದವರಿಗೆ ಮಾತ್ರ ಅರ್ಹವಾಗಬೇಕಿರುವ ವೃದ್ಧರ ವೇತನ, ಕೆಲವು ಗ್ರಾಮಗಳಲ್ಲಿ 30 ರಿಂದ 58 ವರ್ಷದವರಿಗೂ ಮಂಜೂರಾಗಿರುವುದು ದೊಡ್ಡ ಅಕ್ರಮ ಎಂದು ಸೋಲದಾಬಕಾದ ನಿವಾಸಿಗಳು ಹೇಳುತ್ತಾರೆ. ಈ ಕುರಿತು ತಹಶೀಲ್ದಾರ್ ಶಿವಾನಂದ ಮೆತ್ರೆ ಅವರಿಗೆ ಮನವಿ ಸಲ್ಲಿಸಿದ ಸಾಮಾಜಿಕ ಹೋರಾಟಗಾರ ಬಾಲಾಜಿ ಬಿರಾದಾರ, ‘ಸರಿಯಾದ ಪರಿಶೀಲನೆ ಮಾಡಿದರೆ ಈ ಕಳ್ಳದಂದೆ ಪತ್ತೆಯಾಗುತ್ತದೆ. ಅನರ್ಹರು ಪಡೆದಿರುವ ಹಣವನ್ನು ವಸೂಲಿ ಮಾಡಿ ಖಜಾನೆಗೆ ಜಮಾ ಮಾಡಬೇಕು’ ಎಂದು ದೂರುತ್ತಾರೆ.
ವಿಕಲಚೇತನರ ಹಿತರಕ್ಷಣಾ ಸಮಿತಿ ಹಾಗೂ ಭಾರತೀಯ ಅಂಗವಿಕಲರ ಸಂಘದ ತಾಲೂಕು ಅಧ್ಯಕ್ಷ ಶಾಂತಕುಮಾರ ಮುಕ್ತಾ ಪ್ರತಿಕ್ರಿಯಿಸಿ, ‘ಅಂಗವಿಕಲರಿಗೆ ನೀಡುವ ಪ್ರಮಾಣಪತ್ರಗಳು ವೈದ್ಯಕೀಯ ಪರೀಕ್ಷೆಯ ಆಧಾರಿತವಾಗಿರಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಮಧ್ಯವರ್ತಿಗಳು ಹಣ ಪಡೆದು ಕಡಿಮೆ ಅಂಗವೈಕಲ್ಯ ಹೊಂದಿದವರಿಗೆ ಹೆಚ್ಚು ಪ್ರತಿಶತ ಪ್ರಮಾಣಪತ್ರ ದೊರಕುವಂತೆ ಮಾಡುತ್ತಿದ್ದಾರೆ. ಇದರ ಪರಿಣಾಮ ಅನರ್ಹರು ಹೆಚ್ಚಿನ ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಅರ್ಹರು ಹೊರಗಾಗಿ ಮತ್ತು ಅನರ್ಹರು ಒಳಬಂದರೆ, ಯೋಜನೆಯ ಉದ್ದೇಶವೇ ಹಾಳಾಗುತ್ತದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ದಿಲೀಪ್ ಉತ್ತಮ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.
ಸರ್ಕಾರ ಈಗಾಗಲೇ ಜಿಲ್ಲಾಮಟ್ಟದ ವಿಶೇಷ ಶೋಧನಾ ತಂಡಗಳನ್ನು ರಚಿಸಿ, ಅನರ್ಹ ಫಲಾನುಭವಿಗಳ ಹೆಸರನ್ನು ತೆಗೆದುಹಾಕುವ ಹಾಗೂ ಹಣ ಮರುಪಾವತಿ ಕ್ರಮ ಕೈಗೊಳ್ಳುವ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಪಿಂಚಣಿ ತಾತ್ಕಾಲಿಕವಾಗಿ ನಿಲ್ಲಿಸಿ ಮರುಪರಿಶೀಲನೆ ಪ್ರಕ್ರಿಯೆ ಆರಂಭಿಸಲಾಗಿದೆ.
ಸ್ಥಳೀಯರು ಕಂದಾಯ ಇಲಾಖೆಗೆ ಸ್ಪಷ್ಟವಾಗಿ ಮನವಿ ಮಾಡಿಕೊಂಡಿದ್ದು, ತಾಲ್ಲೂಕಿನಾದ್ಯಂತ ಸಮಗ್ರ ಪರಿಶೀಲನೆ ನಡೆಸಿ, ಯೋಜನೆಗಳ ಲಾಭ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.