
ಬೀದರ್: ನಗರದ ಪಾಪನಾಶ ದೇವಾಲಯವೂ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ.
ದೇಗುಲದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ‘ಪ್ರಸಾದ್’ ಯೋಜನೆಯಡಿ ₹22 ಕೋಟಿ ಅನುದಾನ ಮಂಜೂರು ಮಾಡಿದೆ. ಫೆಬ್ರುವರಿ 7ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ಆರಂಭಗೊಂಡಿದೆ.
‘ಈ ಕಾಮಗಾರಿಗೆ 2024ರ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಗ ಪುನಃ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿಗೆ ಅಪಮಾನ ಮಾಡುವುದು ತಕ್ಕುದಲ್ಲ’ ಎನ್ನುವುದು ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಅವರ ವಾದ. ಈ ಸಂಬಂಧ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ದೂರು ಕೂಡಾ ಸಲ್ಲಿಸಿದ್ದಾರೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಹೇಳುವುದೇ ಬೇರೆ. ‘ಇದರಲ್ಲಿ ಖೂಬಾ ಅವರ ಪಾತ್ರ ಏನೂ ಇಲ್ಲ. ಸಂಸದ ಸಾಗರ ಖಂಡ್ರೆ ಅವರ ಪ್ರಯತ್ನದಿಂದ ಈ ಯೋಜನೆಗೆ ಅನುದಾನ ಮಂಜೂರಾಗಿದೆ. ಈಗ ಕಾಮಗಾರಿಗೆ ಚಾಲನೆ ಕೊಡಲು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ’ ಎಂದಿದ್ದಾರೆ.
‘ಇದು ನನ್ನದೇ ಪ್ರಯತ್ನದಿಂದ ಆಗಿರುವ ಕೆಲಸ’ ಎಂದು ಇಬ್ಬರೂ ನಾಯಕರು ಅದರ ಶ್ರೇಯ ಪಡೆಯಲು ಮುಂದಾಗಿದ್ದಾರೆ. ಇದೇ ಈಗ ಜಟಾಪಟಿಗೆ ಕಾರಣವಾಗಿದೆ. ಇನ್ನಷ್ಟೇ ದೇವಸ್ಥಾನದ ಅಭಿವೃದ್ಧಿಗೆ ಚಾಲನೆ ಸಿಗಬೇಕಿದೆ. ಆದರೆ, ಅದಕ್ಕೂ ಮೊದಲೇ ಎರಡೂ ಕಡೆಯವರ ವಾದ–ವಿವಾದ, ಪರಸ್ಪರ ಆರೋಪ–ಪ್ರತ್ಯಾರೋಪದಿಂದ ಭಕ್ತರಿಗೆ ನೋವಾಗಿದೆ. ‘ದೇವಸ್ಥಾನದ ಹೆಸರಿನಲ್ಲಿ ಬಹಿರಂಗವಾಗಿ ಟೀಕೆ, ಟಿಪ್ಪಣಿ ಮಾಡುತ್ತಿರುವುದು ಸರಿಯಲ್ಲ. ಪಾಪನಾಶ ಸುಕ್ಷೇತ್ರಕ್ಕೆ ಮಾಡುತ್ತಿರುವ ಅಪಮಾನವಿದು’ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲೆಡೆ ಸಾಗರ ಕಟೌಟ್:
ಪಾಪನಾಶ ದೇಗುಲದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಫೆ. 7ರಂದು ನಡೆಯಲಿದ್ದು, ಅದಕ್ಕಾಗಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕಟೌಟ್‌ಗಳು ರಾರಾಜಿಸುತ್ತಿವೆ. ಸಂಸದ ಸಾಗರ ಖಂಡ್ರೆ ಅವರ ಭಾವಚಿತ್ರವಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗಿದ್ದು, ಅದರಲ್ಲಿ ಯೋಜನೆಯ ವಿವರ ಇದೆ.
ಪ್ರಧಾನಿಗೆ ಅವಮಾನ: ಖೂಬಾ ದೂರು
2024ರ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಪಾಪನಾಶ ದೇವಸ್ಥಾನದ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಟೆಂಡರ್ ಆಗಿ ಏಜೆನ್ಸಿ ಕೂಡ ನಿಗದಿಯಾಗಿದೆ. ಆದರೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಮತ್ತೊಮ್ಮೆ ಶಿಲಾನ್ಯಾಸಕ್ಕೆ ಮುಂದಾಗಿದ್ದಾರೆ. ಇದು ಪ್ರಧಾನಿಯವರನ್ನು ಅವಮಾನಿಸುವ ಕೆಲಸ. ಆದಕಾರಣ ಮತ್ತೊಮ್ಮೆ ಶಂಕುಸ್ಥಾಪನೆಗೆ ಅವಕಾಶ ಕೊಡಬಾರದು. ಈ ಕುರಿತು ಬೀದರ್ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈಶ್ವರ ಖಂಡ್ರೆ ಹೇಳುವುದೇನು?
ಪಾಪನಾಶ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹22 ಕೋಟಿ ಅನುದಾನ ಮಂಜೂರು ಮಾಡಿದೆ. ಇದು ಸಂಸದ ಸಾಗರ ಖಂಡ್ರೆಯವರ ಪ್ರಯತ್ನದಿಂದ ಸಾಧ್ಯವಾಗಿದೆ. ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಫೆಬ್ರುವರಿ 7ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು. ಇಲ್ಲಸಲ್ಲದ ಮಾತುಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
‘ತಂದೆ–ಮಗನ ನಯಾ ಪೈಸೆ ಪ್ರಯತ್ನ ಇಲ್ಲ’
‘ಇದರಲ್ಲಿ ತಂದೆ–ಮಗನ ಒಂದು ನಯಾ ಪೈಸೆ ಪ್ರಯತ್ನವೂ ಇಲ್ಲ. ಕೇಂದ್ರ ಸರ್ಕಾರದ ಯೋಜನೆಯನ್ನು ಒಂದು ವರ್ಷ ವಿಳಂಬ ಮಾಡಿರುವುದರ ಹಿಂದೆ ಇವರ ಕೊಡುಗೆ ಇದೆ. 2024ರ ಮಾರ್ಚ್ ಮೊದಲೇ ಎಲ್ಲ ಪ್ರಕ್ರಿಯೆ ಮುಗಿದಿದೆ. ಟೆಂಡರ್ ಕರೆಯುವುದು ರಾಜ್ಯ ಸರ್ಕಾರದ ಹೊಣೆ. ಅಧಿಕಾರದಲ್ಲಿದ್ದು ಕಾಮಗಾರಿಗೆ ವೇಗ ಕೊಡುವುದರ ಬದಲು ಟೆಂಡರ್ ಮುಗಿದು ಆರು ತಿಂಗಳಾದರೂ ಕೆಲಸ ಮಾಡಲು ಬಿಟ್ಟಿರಲಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.
ಜಿಲ್ಲಾಧಿಕಾರಿ ಏನಂತಾರೆ?
‘ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಆದರೆ ಆಗ ಕೆಲಸ ಆರಂಭಿಸಲು ಟೆಂಡರ್ ಆಗಿರಲಿಲ್ಲ. ಈಗ ಟೆಂಡರ್ ಆಗಿರುವುದರಿಂದ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಫೆ.7ರಂದು ಶಂಕುಸ್ಥಾಪನೆ
ಬೀದರ್: ನಗರದ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಫೆ. 7ರಂದು ಬೆಳಿಗ್ಗೆ 11ಕ್ಕೆ ದೇವಸ್ಥಾನದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಶಂಕುಸ್ಥಾಪನೆ ನೆರವೇರಿಸುವರು. ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಪೌರಾಡಳಿತ ಸಚಿವ ರಹೀಂ ಖಾನ್ ಸಂಸದ ಸಾಗರ ಖಂಡ್ರೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.