ADVERTISEMENT

ಬೀದರ್‌ನಲ್ಲಿ ಇಂದಿರಾ ಕಾಲದ ‘ಎಮರ್ಜೆನ್ಸಿ’: ಕೇಂದ್ರದ ಮಾಜಿ ಸಚಿವ ಖೂಬಾ

ಉಸ್ತುವಾರಿ ಸಚಿವರು, ಸಿಎಂ- ಹೈಕಮಾಂಡ್‌ ಕಲೆಕ್ಷನ್‌ ಏಜೆಂಟ್‌

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 14:53 IST
Last Updated 17 ಏಪ್ರಿಲ್ 2025, 14:53 IST
   

ಬೀದರ್‌: ‘ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಕಲೆಕ್ಷನ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ಈಶ್ವರ ಬಿ. ಖಂಡ್ರೆಯವರ ಹೆಸರು ಪ್ರಸ್ತಾಪಿಸದೇ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿಯವರನ್ನು ಯಾವ ಪುರುಷಾರ್ಥಕ್ಕೆ ಜಿಲ್ಲೆಗೆ ಕರೆಸಿದ್ದಾರೆ ಗೊತ್ತಿಲ್ಲ. 2017ರಲ್ಲಿ ಇದೇ ಸಿದ್ದರಾಮಯ್ಯನವರು ಅರ್ಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಪುನಃ ಮಾಡಿದ್ದಾರೆ. ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕಾಲದಲ್ಲಿ ಜಿಲ್ಲೆಗೆ ನೀರಾವರಿ ಯೋಜನೆಗಳು ಮಂಜೂರಾಗಿದ್ದವು. ಗ್ಯಾರಂಟಿ ಯೋಜನೆಗಳು ಜಾರಿಗೆ ತಂದ ನಂತರ ಅವುಗಳಿಗೆ ಅನುದಾನ ಕೊಟ್ಟಿರಲಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ದೀನ ದಲಿತರ ಮೇಲೆ ಅನ್ಯಾಯ ಹೆಚ್ಚಾಗಿದೆ. ಅಧಿಕಾರಿಗಳ ಸುಲಿಗೆ ಹೆಚ್ಚಿದೆ. ಸಚಿವರ ಕಣ್ಣು ಕುರುಡಾಗಿದೆ. ಕಿವಿ ಕೇಳುತ್ತಿಲ್ಲ. ಸ್ವತಃ ಅವರೇ ಕಲೆಕ್ಷನ್‌ಏಜೆಂಟ್‌ ಆಗಿರುವುದರಿಂದ ಮೂಕ ಕೂಡ ಆಗಿದ್ದಾರೆ ಎಂದು ಟೀಕಿಸಿದರು.

ADVERTISEMENT

ಜಿಲ್ಲೆಯಲ್ಲಿ ಇಂದಿರಾ ಗಾಂಧಿ ಕಾಲದ ‘ಎಮರ್ಜೆನ್ಸಿ’ ನೆನಪಾಗುತ್ತಿದೆ. ಕನ್ನಡಪರ ಹೋರಾಟಗಾರರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ, ಅವರನ್ನು ಹೆದರಿಸಿ, ಬೆದರಿಸಿ, ಸಮಾಜಘಾತುಕ ಶಕ್ತಿ ಹಣೆಪಟ್ಟಿ ಹಚ್ಚಿ ಅವಕಾಶ ನಿರಾಕರಿಸಿದ್ದಾರೆ. ಪೊಲೀಸ್‌ ಇಲಾಖೆಯ ದುರುಪಯೋಗ ಸರಿಯಲ್ಲ. ಜನರ ಬಗ್ಗೆ ಕಳಕಳಿ, ಕಾಳಜಿ ಹೊಂದಿರಬೇಕು. ಸಚಿವರು ಏನು ಮಾಡುತ್ತಿದ್ದಾರೆ ಎನ್ನುವುದರ ಅರಿವು ಅವರಿಗಿಲ್ಲ. ತಮ್ಮ ವೈಭವೀಕರಣಕ್ಕೆ ಸಿಎಂ, ಡಿಸಿಎಂ ಅವರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಕುಟುಕಿದರು.

ನಾನು ಕೇಂದ್ರದಲ್ಲಿ ಸಚಿವನಿದ್ದಾಗ 10 ವರ್ಷಗಳಲ್ಲಿ ಕೇಂದ್ರದ ಅನೇಕ ಯೋಜನೆಗಳನ್ನು ಜಿಲ್ಲೆಗೆ ಮಂಜೂರು ಮಾಡಿಸಿದ್ದೆ. ಅವುಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ. ಇವರು ಹೀನ ಮನಸ್ಸಿನ ಉಸ್ತುವಾರಿ ಸಚಿವರು. ಬ್ಯಾಂಕ್‌ ದರೋಡೆ ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಇವರ ವರ್ತನೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಜಾತಿಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಚನ್ನಗಿರಿಯ ಶಾಸಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿ ಆಗಿರುವ ಈಶ್ವರ ಬಿ. ಖಂಡ್ರೆಯವರಿಗೆ ಕರೆ ಮಾಡಿದರೆ ಸ್ವೀಕರಿಸಿಲ್ಲ. ಇವರಿಗೆ ಮಾನ, ಮರ್ಯಾದೆ ಇದೆಯೇ? ಇವರು ಸಮಾಜಕ್ಕೇನು ನ್ಯಾಯ ಕೊಡಿಸುತ್ತಾರೆ. ಅವರನ್ನು ತಕ್ಷಣವೇ ಆ ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಎಮ್.ಜಿ ಮುಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಿರಣ್‌ ಪಾಟೀಲ, ಜಿಲ್ಲಾ ಸಹ ವಕ್ತಾರ ಗುರುನಾಥ ರಾಜಗೀರಾ, ಬೀದರ್‌ ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ, ಬೀದರ್‌ ದಕ್ಷಿಣ ಅಧ್ಯಕ್ಷಷ ಗುರುನಾಥ ರಾಜಗೀರಾ ಬಗದಲ್, ಮಾಧ್ಯಮ ಪ್ರಮುಖ ಶ್ರೀನಿವಾಸ ಚೌಧರಿ, ಕಲಬುರಗಿ ವಿಭಾಗ ಮಾಧ್ಯಮ ಪ್ರಮುಖ ವೆಂಕಟೇಶ ಮಾಲಪಾಟಿ, ಮುಖಂಡರಾದ ರಘುನಾಥರಾವ್‌ ಮಲ್ಕಾಪುರೆ, ಈಶ್ವರ ಸಿಂಗ್‌ ಠಾಕೂರ್‌, ಬಾಬು ವಾಲಿ ಹಾಜರಿದ್ದರು.

‘ಅಮಾನತು ಮಾಡ್ತೀರಾ?ಪ್ರಶಸ್ತಿ ಕೊಡ್ತೀರಾ?’

‘ಜಿಲ್ಲೆಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಅರಣ್ಯ ಅಧಿಕಾರಿಗಳನ್ನು ಅಮಾನತು ಮಾಡ್ತೀರಾ? ಅಥವಾ ಪ್ರಶಸ್ತಿ ಕೊಡ್ತೀರಾ? ಸಚಿವ ಖಂಡ್ರೆಯವರಿಗೆ ನಾಚಿಕೆಯಾಗಬೇಕು’ ಎಂದು ಭಗವಂತ ಖೂಬಾ ಕಿಡಿಕಾರಿದರು.

ಪತ್ರಕರ್ತನ ಮೇಲೆ ಹಲ್ಲೆ ನಡೆದಾಗ ಘಟನೆಯ ಮಾಹಿತಿ ಪಡೆದು ಕ್ರಮ ಜರುಗಿಸಬೇಕಿತ್ತು. ಆದರೆ, ಅವರು ಏನೂ ಮಾಡಿಲ್ಲ. ಸಚಿವರು ಅಧಿಕಾರಿಗಳಿಂದ ಹಣ ಕೇಳುತ್ತಿದ್ದಾರೆ. ಹೀಗಾಗಿ ನೈತಿಕತೆ ಅವರಲ್ಲಿ ಉಳಿದಿಲ್ಲ ಎಂದರು.

‘48 ವಸ್ತುಗಳ ಬೆಲೆ ಏರಿಕೆ; ಶಿಷ್ಟಾಚಾರ ಉಲ್ಲಂಘನೆ’

‘ರಾಜ್ಯ ಸರ್ಕಾರವು ರಾಜ್ಯದಲ್ಲಿ 48 ವಸ್ತುಗಳ ಬೆಲೆ ಏರಿಕೆ ಮಾಡಿದೆ. ಕಸದ ಮೇಲೂ ತೆರಿಗೆ ಹಾಕಿದ್ದಾರೆ. ಹಾಲಿನ ದರ, ವಿದ್ಯುತ್‌ ದರ, ಬಸ್‌ ದರ, ಬಿತ್ತನೆ ಬೀಜ, ಬಾಂಡ್‌, ಟ್ರಾನ್ಸ್‌ಫಾರ್ಮರ್‌ ಪ್ರಮುಖವಾದವುಗಳು. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ವಿರುದ್ಧ ಪಕ್ಷದಿಂದ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಹೇಳಿದರು.

ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದು ಹಾಸ್ಯಾಸ್ಪದ. ಜನರಿಗೆ ಸುಳ್ಳು ಹೇಳಿ ನಂಬಿಸಲು ಹೊರಟಿದ್ದಾರೆ. ಸ್ವತಃ ಅವರ ಪಕ್ಷದ ಶಾಸಕರಿಗೆ ಅನುದಾನ ಕೊಡುವ ಸ್ಥಿತಿಯಲ್ಲಿ ಇಲ್ಲ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಜಿಲ್ಲಾಡಳಿತದಿಂದ ಗುರುವಾರ (ಏ.16) ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಕೂರಿಸಿ, ಶಿಷ್ಟಾಚಾರ ಉಲ್ಲಂಘಿಸಲಾಗಿದೆ’ ಎಂದು ಆರೋಪಿಸಿದರು.

ನಾಳೆ ಜನಾಕ್ರೋಶ ಯಾತ್ರೆ

‘ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಲ್ಪಸಂಖ್ಯಾತರ ತುಷ್ಟೀಕರಣ, ಧರ್ಮಾಧಾರಿತ ಮೀಸಲಾತಿ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆ ಶುಕ್ರವಾರ ಸಂಜೆ 4ಕ್ಕೆ ಬೀದರ್‌ ನಗರ ತಲುಪಲಿದೆ’ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ತಿಳಿಸಿದರು.

ನಗರದ ಗಣೇಶ ಮೈದಾನದಿಂದ ಶಿವಾಜಿ ವೃತ್ತದವರೆಗೆ ಯಾತ್ರೆ ನಡೆಯಲಿದೆ. ಅಲ್ಲಿ ಸಾರ್ವಜನಿಕ ಸಭೆ ಜರುಗಲಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಇತರೆ ನಾಯಕರು ಪಾಲ್ಗೊಳ್ಳುವರು ಎಂದು ವಿವರಿಸಿದರು.

‘ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಮರು ಸಮೀಕ್ಷೆ ನಡೆಸಬೇಕು. ಕನ್ನಡ ಬೋರ್ಡ್‌ ಬದಲಿಸಿ ಉರ್ದು ಬೋರ್ಡ್‌ ಹಾಕಿಸುತ್ತಿರುವ ಸಚಿವ ರಹೀಂ ಖಾನ್‌ ಧೋರಣೆ ಸರಿಯಲ್ಲ. ತಮ್ಮನ್ನು ಹೊಗಳಿಸಿಕೊಳ್ಳಲು ಸಚಿವ ಈಶ್ವರ ಬಿ. ಖಂಡ್ರೆಯವರು ಮುಖ್ಯಮಂತ್ರಿಯವರನ್ನು ಜಿಲ್ಲೆಗೆ ಕರೆಸಿದ್ದಾರೆ. ₹2025 ಕೋಟಿ ಅನುದಾನ ಎಲ್ಲಿಂದ ತಂದಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.