ADVERTISEMENT

ಧರ್ಮದ ಹೆಸರಲ್ಲಿ ರಾಜಕಾರಣ ಅಪಾಯಕಾರಿ: ಸಾತಿ ಸುಂದರೇಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 16:05 IST
Last Updated 27 ಜನವರಿ 2024, 16:05 IST
ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಮಾತನಾಡಿದರು
ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಮಾತನಾಡಿದರು   

ಬೀದರ್‌: ‘ದೇಶದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ ಹೇಳಿದರು.

ನಗರದ ಸಿಪಿಐ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಂಡಲದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಸಾಮಾನ್ಯರ ಅನೇಕ ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಧಾರ್ಮಿಕ ವಿಷಯಗಳಿಂದ ಭಾವನಾತ್ಮಕವಾಗಿ ಕೆರಳಿಸಲಾಗುತ್ತಿದೆ. ಜನರ ಬದುಕು ಕಟ್ಟುವ ರಾಜಕಾರಣ ಇಂದಿನ ತುರ್ತು ಅಗತ್ಯ ಎಂದು ತಿಳಿಸಿದರು.

ದೇಶದ ಜನರನ್ನು ಧರ್ಮದ ಹೆಸರಿನಲ್ಲಿ ಸಮೂಹಸನ್ನಿಗೆ ಬಳಸಿಕೊಂಡು ಬಿಜೆಪಿ, ಆರ್‌ಎಸ್‌ಎಸ್‌ ರಾಜಕಾರಣ ಮಾಡುತ್ತಿವೆ. ಇದು ಖಂಡನಾರ್ಹ, ಪ್ರಜಾಪ್ರಭುತ್ವಕ್ಕೆ ಅಪಾಯ. ಗಣರಾಜ್ಯ ದೇಶವನ್ನು ರಾಮರಾಜ್ಯ ಮಾಡಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಪಕ್ಷವು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ADVERTISEMENT

ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಆ ದೃಷ್ಟಿಯಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜಾತ್ಯತೀತ, ಪ್ರಗತಿಪರ ಮತ್ತು ಎಡಪಕ್ಷಗಳು ಒಗ್ಗೂಡಿ ರಚಿಸಿದ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ನಾವಿದ್ದೇವೆ. ರಾಜ್ಯದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿ ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯಗಳಿಗೆ ಬೆಲೆ ಕೊಡುವ ಸರ್ಕಾರವನ್ನು ಕೇಂದ್ರದಲ್ಲಿ ರಚಿಸಲು ರಾಜಕೀಯ ಹೋರಾಟ ನಡೆಸಲು ಸಿದ್ಧ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಪುನಃ ಬಿಜೆಪಿ ಪಕ್ಷ ಸೇರ್ಪಡೆಯಾಗಿರುವುದು ನೋಡಿದರೆ ಯಾವುದೇ ರಾಜಕಾರಣಿಗಳಿಗೆ ಪಕ್ಷ ನಿಷ್ಠೆ, ಸೈದ್ಧಾಂತಿಕ ರಾಜಕಾರಣ ಬೇಡವಾಗಿದೆ ಎನ್ನುವುದು ಗೊತ್ತಾಗುತ್ತದೆ. ರಾಜಕಾರಣ ಕಲುಷಿತ ಮಾಡುತ್ತಿರುವ ರಾಜಕೀಯ ಮುಖಂಡರನ್ನು ಜನರೇ ಬಹಿಷ್ಕರಿಸಬೇಕು ಎಂದು ಹೇಳಿದರು.

ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್‌, ಸಿಪಿಐ ರಾಜ್ಯ ಸಮಿತಿ ಮುಖಂಡ ಮೌಲಾ ಮುಲ್ಲಾ, ‌ಜಿಲ್ಲಾ ಸಿಪಿಐ ಮುಖಂಡ ಬಾಬುರಾವ ಹೊನ್ನಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.