ADVERTISEMENT

ನೈಜ ಸಮಸ್ಯೆ ಮರೆಮಾಚಲು ಸಮೀಕ್ಷೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 12:53 IST
Last Updated 26 ಸೆಪ್ಟೆಂಬರ್ 2025, 12:53 IST
<div class="paragraphs"><p>ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಬೀದರ್‌ ಜಿಲ್ಲಾ ಬಿಜೆಪಿ ಮುಖಂಡರು ಬೀದರ್‌ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸ್ವಾಗತಿಸಿದರು</p></div>

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಬೀದರ್‌ ಜಿಲ್ಲಾ ಬಿಜೆಪಿ ಮುಖಂಡರು ಬೀದರ್‌ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸ್ವಾಗತಿಸಿದರು

   

ಬೀದರ್‌: ‘ತಮ್ಮ ವೈಫಲ್ಯ ಹಾಗೂ ನೈಜ ಸಮಸ್ಯೆಗಳನ್ನು ಮರೆಮಾಚುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದೆ’ ಎಂದು ಕೇಂದ್ರದ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಜಿಲ್ಲೆಯ ಬಸವಕಲ್ಯಾಣದಲ್ಲಿ ಶುಕ್ರವಾರ ರಾತ್ರಿ ನಡೆಯಲಿರುವ ದಸರಾ ಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ADVERTISEMENT

ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಯಾವ ಕ್ಷೆತ್ರದಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡವರಿಗೆ ಸೂಕ್ತ ತರಬೇತಿಯೇ ಕೊಟ್ಟಿಲ್ಲ. ಜನ ಕೂಡ ಇದರ ಬಗ್ಗೆ ಉತ್ಸುಕರಾಗಿಲ್ಲ. ಈ ಹಿಂದೆ ಸಮೀಕ್ಷೆ ನಡೆಸಿ, ಅದನ್ನು ತಿಪ್ಪೆಗೆ ಎಸೆದಿದ್ದಾರೆ. ಇವರು ಬೋಗಸ್‌ ಇದ್ದಾರೆ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರವು ಒಳಜಗಳ, ವೈಫಲ್ಯದಿಂದ ಅಸ್ಥಿರವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಕ್ಟೋಬರ್‌–ನವೆಂಬರ್‌ನಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಮಾಜಿಸಚಿವ ಕೆ.ಎನ್‌. ರಾಜಣ್ಣ ಹೇಳಿದ್ದಾರೆ. ಈಗಾಗಲೇ ಸೆಪ್ಟೆಂಬರ್ ಮುಗಿಯಲು ಬಂದಿದೆ. ಆ ಕ್ರಾಂತಿ ಮುಂದೆ ಹಾಕಲು, ಒಳಜಗಳ ಮರೆಮಾಚಲು ಸಮೀಕ್ಷೆ ನಡೆಸುತ್ತಿದ್ದಾರೆ. ಯಾವ ಜಾತಿಯವರಿಗೆ ಕಾಂಗ್ರೆಸ್‌ ಪಕ್ಷ ಒಳ್ಳೆಯದು ಮಾಡಿದೆ. ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನು ಕಾಂಗ್ರೆಸ್‌ ವಿರೋಧಿಸುತ್ತಲೇ ಬಂದಿದೆ. ಸಂಸತ್ತಿನಲ್ಲಿ ವಿರೋಧ ಮಾಡಿದ್ದಾರೆ. ಸಿದ್ದರಾಮಯ್ಯನವರು ಡ್ರಾಮಾ ಮಾಡುತ್ತಿದ್ದಾರೆ ಎಂದರು.

2026ರಲ್ಲಿ ಕೇಂದ್ರ ಸರ್ಕಾರ ಜನಗಣತಿ ಮಾಡಲಿದೆ. ಅದಕ್ಕೆ ತಯಾರಿ ನಡೆದಿದೆ. ಇಡೀ ದೇಶದಾದ್ಯಂತ ತರಬೇತಿ ಕೊಟ್ಟು ಏನು ಪ್ರಶ್ನೆಗಳನ್ನು ಕೇಳಬೇಕು ತಿಳಿಸಿಕೊಡಲಾಗುತ್ತದೆ. ಇದನ್ನು ವ್ಯವಸ್ಥಿತವಾಗಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಒಂದು ಕಡೆ ಜನರ ಹೊರೆಯನ್ನು ಕಡಿಮೆ ಮಾಡಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಭಾರತ ಹೊರಹೊಮ್ಮಿದೆ. ಜಿಎಸ್‌ಟಿಯಲ್ಲಿ ತಂದ ಬದಲಾವಣೆ ಐತಿಹಾಸಿಕವಾದುದು. ಸ್ವಾತಂತ್ರ್ಯ ನಂತರದ ಬಹಳ ದೊಡ್ಡ ಸುಧಾರಣೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.