ADVERTISEMENT

ಪ್ರಜಾವಾಣಿ ಫೋನ್‌ ಇನ್‌ | ಗರ್ಭಧಾರಣೆ: ಬಿಚ್ಚು ಮನಸ್ಸಿನಿಂದ ಪ್ರಶ್ನೆ ಕೇಳಿದ ಜನ

ಚಂದ್ರಕಾಂತ ಮಸಾನಿ
Published 18 ಜನವರಿ 2022, 14:51 IST
Last Updated 18 ಜನವರಿ 2022, 14:51 IST
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ ಬಿ.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ ಬಿ.   

ಬೀದರ್‌: ‘ಪ್ರಜಾವಾಣಿ’ ವತಿಯಿಂದ ಇಲ್ಲಿಯ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಪುರುಷರು ಭಾಗವಹಿಸಿ ಬಿಚ್ಚು ಮನಸ್ಸಿನಿಂದ ಹಲವು ಪ್ರಶ್ನೆಗಳನ್ನು ಕೇಳಿ ತಮ್ಮಲ್ಲಿನ ಗೊಂದಲ ನಿವಾರಿಸಿಕೊಂಡರು.

ಹತ್ತು ವರ್ಷಗಳಿಂದ ಪ್ರಯತ್ನಿಸಿದರೂ ಗರ್ಭಧಾರಣೆ ಆಗದಿರುವುದು, ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರ, ಭ್ರೂಣ ಬೆಳವಣಿಗೆ, ಎರಡು ಮಕ್ಕಳ ಮಧ್ಯೆ ಇರಬೇಕಾದ ಅಂತರ, ಮಕ್ಕಳಲ್ಲಿನ ಅಪೌಷ್ಟಿಕತೆ, ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ಓದುಗರು ಪ್ರಶ್ನೆಗಳನ್ನು ಕೇಳಿದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ ಬಿ. ಅವರು ಕ್ಲಿಷ್ಟಕರ ಪ್ರಶ್ನೆಗಳನ್ನು ಸಮಾಧಾನದಿಂದ ಆಲಿಸಿ ಕೇಳುಗರಿಗೆ ಮನವರಿಕೆಯಾಗುವ ರೀತಿಯಲ್ಲಿ ಸರಳವಾಗಿ ಉತ್ತರಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿನ ಕುಟುಂಬ ಕಲ್ಯಾಣ ಯೋಜನೆಯ ಲಾಭ ಪಡೆಯಬೇಕು. ಸುಲಭ ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಳುಗರಿಗೆ ಸಲಹೆ ನೀಡಿದರು.

ADVERTISEMENT

* ಪ್ರಶ್ನೆ: ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಕಾಂಡೋಮ್‌ ಇಡುತ್ತಿಲ್ಲ ಏಕೆ?

–ಶಿವಕುಮಾರ, ಬಸವಕಲ್ಯಾಣ

ಉ: ಎಲ್ಲೆಡೆ ಎಚ್‌ಐವಿ ಪ್ರಮಾಣ ಕಡಿಮೆಯಾದ ಮೇಲೆ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಕಾಂಡೋಮ್‌ ಇಡುವುದನ್ನು ನಿಲ್ಲಿಸಲಾಗಿದೆ. ಆದರೆ, ಜಿಲ್ಲೆಯ ಎಲ್ಲ 53 ಪ್ರಾಥಮಿಕ, 8 ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಇರುವ ಡಾಬಾಗಳಲ್ಲಿ ಇಂದಿಗೂ ಉಚಿತ ಕಾಂಡೋಮ್‌ ಪೂರೈಸಲಾಗುತ್ತಿದೆ. ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಸರಾಸರಿ 25 ಸಾವಿರ ಕಾಂಡೋಮ್‌ ವಿತರಿಸುತ್ತಿದೆ.

* ಶಸ್ತ್ರಚಿಕಿತ್ಸೆ ಇಲ್ಲದೆ ಸಂತಾನಶಕ್ತಿ ನಿಯಂತ್ರಣ ಸಾಧ್ಯವೆ?
–ಸಿದ್ಧಾರೂಢ ಬಾವಗಿ

ಶಸ್ತ್ರಚಿಕಿತ್ಸೆ ಇಲ್ಲದೆ ದಂಪತಿ ಕುಟುಂಬ ಯೋಜನಾ ವಿಧಾನ ಅನುಸರಿಸಬಹುದಾಗಿದೆ. ‘ಛಾಯಾ’ ಮಾತ್ರೆ ಸದ್ಯ ಮುಂಚೂಣಿಯಲ್ಲಿದೆ. ಛಾಯಾ 8 ಮಾತ್ರೆಗಳ ಒಂದು ಸ್ಟ್ರಿಪ್‌ ಇರುತ್ತದೆ. ಮೊದಲನೇ ಮೂರು ತಿಂಗಳ ಅವಧಿಯಲ್ಲಿ ವಾರದಲ್ಲಿ ಎರಡು ಮಾತ್ರೆ ತೆಗೆದುಕೊಳ್ಳಬೇಕು. ಎರಡು ಮಾತ್ರೆಗಳ ಸೇವನೆಯ ಮಧ್ಯೆಯೂ ಮೂರು ದಿನ ಗ್ಯಾಪ್‌ ಇರಬೇಕು. ಅಲ್ಲದೇ, ಪ್ರತಿ ಮೂರು ತಿಂಗಳಿಗೆ ಒಂದು ‘ಅಂತರ’ ಇಂಜೆಕ್ಷನ್‌ ತೆಗೆದುಕೊಳ್ಳಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ.

* ಪಿಎಚ್‌ಸಿಗಳಲ್ಲಿ ಸಂತಾನ ಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಏಕೆ ಆಗುತ್ತಿಲ್ಲ?
–ಅಶೋಕ, ಬೀದರ್

ಶಸ್ತ್ರಚಿಕಿತ್ಸಾ ವಿಭಾಗ ಇರುವ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಂತಾನ ಶಕ್ತಿನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಕೋವಿಡ್ ಕಾರಣ ಹೆಚ್ಚು ಜನ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಆಸ್ಪತ್ರೆಗಳಿಗೆ ಬಂದಿಲ್ಲ.

* ಗಂಡಸರಿಗೆ ಏಕೆ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ?
–ಮಹಿಳೆ ಬೀದರ್

ಯಾರಿಗೂ ಒತ್ತಾಯದಿಂದ ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಲು ಆಗದು. ಪುರುಷರು ಆಸಕ್ತಿಯಿಂದ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಇದಕ್ಕೆ ಅವರಲ್ಲಿರುವ ತಪ್ಪು ಕಲ್ಪನೆ ಕಾರಣ. ಪುರುಷರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಒಂದೇ ದಿನದಲ್ಲಿ ಮನೆಗೆ ಹೋಗಬಹುದು. ಅಷ್ಟೇ ಅಲ್ಲ ಒಂದು ತಿಂಗಳ ನಂತರ ಸ್ವಚ್ಛಂದವಾಗಿ ಲೈಂಗಿಕ ಕ್ರಿಯೆ ನಡೆಸಬಹುದು.

* ನನ್ನ ಅಕ್ಕನ ಮದುವೆಯಾಗಿ 10 ವರ್ಷಗಳಾಗಿವೆ. ಇನ್ನೂ ಮಕ್ಕಳಾಗಿಲ್ಲ. ಎಲ್ಲಿ ಚಿಕಿತ್ಸೆ ಪಡೆಯಬೇಕು?
–ದೀಪಿಕಾ ಬೀದರ್‌

ಮೊದಲ ಹಂತದಲ್ಲಿ ದಂಪತಿ ತಜ್ಞ ವೈದ್ಯರ ಬಳಿ ಸಲಹೆ ಪಡೆಯಬೇಕು. ಸಣ್ಣಪುಟ್ಟ ದೋಷಗಳಿದ್ದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಗರ್ಭಧಾರಣೆಯಲ್ಲಿ ಸಮಸ್ಯೆ ಕಂಡು ಬಂದರೆ ಕೃತಕ ಗರ್ಭಧಾರಣೆ ಮಾಡಿಸಿಕೊಳ್ಳುವುದು ಉತ್ತಮ. ಬೀದರ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯ ಇದೆ.

* ತಾತ್ಕಾಲಿಕ ಗರ್ಭಧಾರಣೆ ತಡೆಯಲು ಏನು ಕ್ರಮ ಅನುಸರಿಸಬೇಕು?
–ಶಾಂತಯ್ಯ ಸ್ವಾಮಿ, ನೆಲವಾಡ

‘ಅಂತರ’ ಚುಚ್ಚುಮದ್ದು, ‘ಛಾಯಾ’ ಮಾತ್ರೆ ಹಾಗೂ ಕಾಪರ್‌–ಟಿ ಬಳಸಬಹುದಾಗಿದೆ. ವೈದ್ಯರ ಸಲಹೆಯಂತೆ ನಾಲ್ಕು ‘ಅಂತರ‘ ಚುಚ್ಚುಮದ್ದು ಪಡೆದರೆ ಒಂದು ವರ್ಷ ಗರ್ಭಧಾರಣೆ ಮುಂದೆ ಹೋಗುತ್ತದೆ. ಮಗು ಬೇಕು ಅನಿಸಿದರೆ ಏಳು ತಿಂಗಳ ಮೊದಲೇ ಚುಚ್ಚುಮದ್ದು ಪಡೆಯುವುದನ್ನು ನಿಲ್ಲಿಸಬೇಕು. ಇದೇ ಅವಧಿಯಲ್ಲಿ ಪೌಷ್ಟಿಕ ಆಹಾರ ಸೇವಿಸಲು ಶುರು ಮಾಡಬೇಕು.

* ಹೊಸದಾಗಿ ಮದುವೆಯಾದ ಮೇಲೆ ಎರಡು ವರ್ಷ ಗರ್ಭಧಾರಣೆ ತಡೆದರೆ ಭವಿಷ್ಯದಲ್ಲಿ ತೊಂದರೆ ಆಗಬಹುದೆ?
–ಬಸವರಾಜ ಗುಡಪಳ್ಳಿ

ಮದುವೆಯಾಗಿ ಕುಟುಂಬ ಯೋಜನಾ ವಿಧಾನ ಅಳವಡಿಸಿ ಮೂರು ವರ್ಷ ಕಳೆದರೂ ಸಮಸ್ಯೆ ಇಲ್ಲ. ಆರೋಗ್ಯವಂತ ದಂಪತಿ 45 ವರ್ಷದ ವರೆಗೂ ಮಗುವನ್ನು ಪಡೆಯಬಹುದು. ಆರಂಭಿಕ ಹಂತದಲ್ಲಿ ಗರ್ಭಧಾರಣೆ ತಡೆದರೂ ನಂತರ ದಿನಗಳಲ್ಲಿ ಯಾವುದೇ ಸಮಸ್ಯೆಯಾಗಲಾರದು.

* ಮಕ್ಕಳಲ್ಲಿ ನ ಅಪೌಷ್ಟಿಕತೆ ನಿವಾರಿಸಲು ಏನು ಮಾಡಬೇಕು?
–ಬಾಲಾಜಿ ಕುಂಬಾರ ಔರಾದ್, ಮಹೇಶ ಗೋರನಾಳಕರ್, ಆನಂದ ಪಾಟೀಲ ಚೌಳಿ, ನಾಗನಾಥ ಬಿರಾದಾರ ಭಾಲ್ಕಿ. ಗುರುನಾಥ ರಾಜಗೀರಾ ಬೀದರ್

ಮಹಿಳೆ ಗರ್ಭಧಾರಣೆ ಸಂದರ್ಭದಲ್ಲಿ ಹೆಚ್ಚು ಪೌಷ್ಟಿಕ ಆಹಾರ ಸೇವಿಸಬೇಕು. ನಿತ್ಯ ಒಂದು ಮೊಟ್ಟೆ, ಸೇಬು ಹಾಗೂ ತರಕಾರಿ ಸೇವಿಸುವುದರಿಂದ ಭ್ರೂಣ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ತಾಯಿಯ ಆರೋಗ್ಯವೂ ಚೆನ್ನಾಗಿ ಇರುತ್ತದೆ.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತಪಾಸಣೆ ಮಾಡಲಾಗುತ್ತದೆ. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. ಹೆಚ್ಚು ಅಪೌಷ್ಟಿಕತೆ ಇದ್ದರೆ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ.
ಆರೋಗ್ಯ ವಿಷಯದಲ್ಲಿ ಮಾಂಸಾಹಾರ, ಸಸ್ಯಾಹಾರ ಎಂದು ವಿಭಜಿಸಿ ನೋಡುವುದು ಬೇಡ. ಯಾರಿಗೆ ಯಾವುದು ಅನುಕೂಲ ಹಾಗೂ ಇಷ್ಟವೋ ಆ ಆಹಾರದ ಮೂಲಕ ಪೌಷ್ಟಿಕ ಆಹಾರ ಸೇವಿಸಲು ಪ್ರಯತ್ನಿಸಬೇಕು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು.

* ಸ್ವಯಂ ಪ್ರೇರಣೆಯಿಂದ ಮುಂದೆ ಬಂದವರಿಗೆ ಬೂಸ್ಟರ್‌ ಕೊಡಬಹುದೆ?

–ವೀರಭದ್ರಪ್ಪ ಉಪ್ಪಿನ್, ನಿವೃತ್ತ ಅಧಿಕಾರಿ

ಸರ್ಕಾರ ಪ್ರಸ್ತುತ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ಕೊಡುತ್ತಿದೆ. ಮುಂಬರುವ ದಿನಗಳಲ್ಲಿ ಹಿರಿಯ ನಾಗರಿಕರಿಗೂ ಬೂಸ್ಟರ್ ಡೋಸ್‌ ದೊರೆಯಲಿದೆ. ಕೋವಿಡ್ ಪ್ರತಿಬಂಧಕ ಲಸಿಕೆಯ ಎರಡನೇ ಡೋಸ್‌ ಪಡೆದ 39 ವಾರಗಳ ನಂತರ ಬೂಸ್ಟರ್‌ ಡೋಸ್ ಕೊಡಲಾಗುತ್ತಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲಗೊಳ್ಳುವುದರಿಂದ ನಿಯಮಾವಳಿ ಪ್ರಕಾರವೇ ಬೂಸ್ಟರ್‌ ಡೋಸ್‌ ಪಡೆಯಬೇಕು.

ಕಡಿಮೆ ಖರ್ಚಿನ, ಜನನ ನಿಯಂತ್ರಣದ ಸುರಕ್ಷಿತ ವಿಧಾನ ಕಾಪರ್-ಟಿ

ಬೀದರ್: ಕಾಪರ್-ಟಿ ಮಹಿಳೆಯರ ಗರ್ಭನಿರೋಧಕ ಸಾಧನವಾಗಿದೆ. ಇದು ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಯೋನಿಯೊಳಗೆ ಪ್ರವೇಶಿಸುವ ವೀರ್ಯಾಣುಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಾಮ್ರ ವೀರ್ಯದ ಜೀವವನ್ನು ನಿರ್ಜೀವ ಮಾಡಿ ಗರ್ಭಧಾರಣೆ ತಡೆಯುತ್ತದೆ.

ಗರ್ಭಾಶಯದೊಳಗೆ ಒಂದು ಐಯುಡಿ ಅಳವಡಿಸಿದ ನಂತರ, 5 ವರ್ಷದ ವರೆಗೆ ಗರ್ಭಧಾರಣೆ ತಡೆಯಬಹುದು. ಇದು ಜನನ ನಿಯಂತ್ರಣಕ್ಕೆ ಅತ್ಯಂತ ಸರಳ ಹಾಗೂ ಅಗ್ಗದ ವ್ಯವಸ್ಥೆಯಾಗಿದೆ. ಮಹಿಳೆ ಬಯಸಿದರೆ ವೈದ್ಯಕೀಯ ವೃತ್ತಿಪರರ ಸಹಾಯದಿಂದ ಕಾಪರ್-ಟಿ ತೆರವುಗೊಳಿಸಿ ಮತ್ತೆ ಗರ್ಭಧಾರಣೆಗೆ ಸನ್ನದ್ಧರಾಗಬಹುದು.

ಏನಿದು ‘ನಿಶ್ಚಯ’

ಆರೋಗ್ಯ ಇಲಾಖೆ ಮಹಿಳೆಯರ ಗರ್ಭಧಾರಣೆ ಪರೀಕ್ಷೆಗೆ ‘ನಿಶ್ಚಯ’ ಕಿಟ್‌ ಪರಿಚಯಿಸಿದೆ. ಆಶಾ ಕಾರ್ಯಕರ್ತೆಯರು ‘ನಿಶ್ಚಯ’ ಚಿಕ್ಕದಾದ ಕಿಟ್‌ ಮೂಲಕ ಸ್ಥಳದಲ್ಲೇ ಗರ್ಭಧಾರಣೆ ಪರೀಕ್ಷಿಸುತ್ತಾರೆ. ಮಹಿಳೆ ಆಸ್ಪತ್ರೆಗೆ ಬರುವ ಅಗತ್ಯವಿಲ್ಲ. ಮಹಿಳೆಯ ಪಿರಿಯಡ್ ನಿಂತ ಅಥವಾ ತಡವಾದಾಗ ಒಂದು ವಾರದಲ್ಲೇ ಗರ್ಭಧಾರಣೆ ಪತ್ತೆ ಮಾಡಬಹುದಾಗಿದೆ.

ಬೆಂಕಿ ಪೊಟ್ಟಣಕ್ಕಿಂತಲೂ ಚಿಕ್ಕದಾದ ಸಾಧನದಲ್ಲಿ ಒಂದು ಹನಿ ಮೂತ್ರ ಹಾಕಿದರೆ ಫಲಿತಾಂಶ ಗೊತ್ತಾಗುತ್ತದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ 40 ಸಾವಿರ ನಿಶ್ಚಯ ಕಿಟ್‌ ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಜಾಗೃತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.