ADVERTISEMENT

ಬೀದರ್: ಸಂಸದರ ಮನೆ ಎದುರು ಪ್ರತಿಭಟನೆ

ಕಾಯ್ದೆಗಳ ತಿದ್ದುಪಡಿ ಹಿಂಪಡೆಯಲು ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 15:02 IST
Last Updated 26 ಸೆಪ್ಟೆಂಬರ್ 2020, 15:02 IST
ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಬೀದರ್‌ನಲ್ಲಿ ಶನಿವಾರ ಸಂಸದ ಭಗವಂತ ಖೂಬಾ ಅವರ ಮನೆ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕನಿಷ್ಠ ಬೆಂಬಲ ಬೆಲೆಯಲ್ಲಿ ಉದ್ದು ಹಾಗೂ ಹೆಸರು ಖರೀದಿ ಆದೇಶ ಪ್ರತಿಯನ್ನು ಸುಟ್ಟು ಹಾಕಿದರು
ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಬೀದರ್‌ನಲ್ಲಿ ಶನಿವಾರ ಸಂಸದ ಭಗವಂತ ಖೂಬಾ ಅವರ ಮನೆ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕನಿಷ್ಠ ಬೆಂಬಲ ಬೆಲೆಯಲ್ಲಿ ಉದ್ದು ಹಾಗೂ ಹೆಸರು ಖರೀದಿ ಆದೇಶ ಪ್ರತಿಯನ್ನು ಸುಟ್ಟು ಹಾಕಿದರು   

ಬೀದರ್: ರೈತರಿಗೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಪುಟ್ಟಣಯ್ಯ ಬಣ) ಕಾರ್ಯಕರ್ತರು ನಗರದ ಶಿವನಗರದಲ್ಲಿ ಇರುವ ಸಂಸದ ಭಗವಂತ ಖೂಬಾ ಅವರ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಕನಿಷ್ಠ ಬೆಂಬಲ ಬೆಲೆಯಲ್ಲಿ ಉದ್ದು ಹಾಗೂ ಹೆಸರು ಖರೀದಿ ಆದೇಶ ಪ್ರತಿಯನ್ನು ಸುಟ್ಟು ಹಾಕಿದರು. ಸಂಸದರಿಗೆ ಬರೆದ ಮನವಿ ಪತ್ರವನ್ನು ಅವರ ಆಪ್ತ ಸಹಾಯಕರಿಗೆ ಸಲ್ಲಿಸಿದರು.

ಜಿಲ್ಲೆಯ ರೈತರು ಸತತ ಅನಾವೃಷ್ಟಿ ಹಾಗೂ ಪ್ರಸಕ್ತ ವರ್ಷ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಗೀಡಾಗಿದ್ದಾರೆ. ಸಾಲಗಾರರಾಗಿದ್ದಾರೆ. ಕಾರಣ ರೈತರ ಎಲ್ಲ ಬ್ಯಾಂಕ್‍ಗಳ ಸಂಪೂರ್ಣ ಸಾಲ ಮನ್ನಾ ಮಾಡಿ, ಹೊಸ ಸಾಲ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ರೈತರ ಕನಿಷ್ಠ 20 ಕ್ವಿಂಟಲ್ ಹೆಸರು, ಉದ್ದು ಹಾಗೂ ತೊಗರಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿತ್ತು. ಇದೀಗ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ರೈತರನ್ನು ಕನಿಷ್ಠವಾಗಿ ಕಾಣುತ್ತಿದೆ ಎಂದು ಆಪಾದಿಸಿದರು.

ಒಂದು ಕಡೆ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿ, ಮತ್ತೊಂದೆಡೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಕೇವಲ 4 ಕ್ವಿಂಟಲ್ ಹೆಸರು ಹಾಗೂ 6 ಕ್ವಿಂಟಲ್ ಉದ್ದು ಖರೀದಿಸುತ್ತಿದೆ ಎಂದು ಟೀಕಿಸಿದರು.

ಸಂಸದರು ಸರ್ಕಾರದ ನೀತಿಯನ್ನು ವಿರೋಧಿಸಬೇಕು. ರೈತರ ಪರ ಧ್ವನಿಯಾಗಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಮುಖಂಡರಾದ ನಾಗಶೆಟ್ಟೆಪ್ಪ ಲಂಜವಾಡೆ, ವಿಶ್ವನಾಥ ಚಿಲಶೆಟ್ಟೆ, ನಾಗೇಂದ್ರಪ್ಪ ತರನಳ್ಳಿ, ಸಂಗಶೆಟ್ಟಿ ಖೇಡ, ಪ್ರಭುದಾಸ ಸಂತಪುರ, ವಿಠ್ಠಲರಾವ್, ಶಾಂತಮ್ಮ ಮೂಲಗೆ, ಬಸವರಾಜ ಅಷ್ಟೂರ್, ಸುಭಾಷ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.