ADVERTISEMENT

ಸತ್ತ ಹಾವಿನೊಂದಿಗೆ ಪ್ರತಿಭಟಿಸಿದ ಜನ!

ವಿದ್ಯುತ್‌ ಸಮಸ್ಯೆ ಪರಿಹರಿಸಲು ಜೆಸ್ಕಾಂ ಅಧಿಕಾರಿಗಳ ವಿಳಂಬ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 3:41 IST
Last Updated 8 ಜುಲೈ 2021, 3:41 IST
ಭಾಲ್ಕಿಯ ಕೆಇಬಿ ಕಚೇರಿ ಮುಂದೆ ವಿದ್ಯುತ್‌ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಬಸವನಗರದ ನಿವಾಸಿಗಳು ಬುಧವಾರ ಸತ್ತ ಹಾವಿನೊಂದಿಗೆ ಪ್ರತಿಭಟನೆ ನಡೆಸಿದರು
ಭಾಲ್ಕಿಯ ಕೆಇಬಿ ಕಚೇರಿ ಮುಂದೆ ವಿದ್ಯುತ್‌ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಬಸವನಗರದ ನಿವಾಸಿಗಳು ಬುಧವಾರ ಸತ್ತ ಹಾವಿನೊಂದಿಗೆ ಪ್ರತಿಭಟನೆ ನಡೆಸಿದರು   

ಭಾಲ್ಕಿ: ಇಲ್ಲಿಯ ವಿದ್ಯುತ್‌ ಕಚೇರಿ ಮುಂಭಾಗದಲ್ಲಿ ಬುಧವಾರ ಭಾಲ್ಕಿ ಹೊರವಲಯದ ಬಸವನಗರದ ನಿವಾಸಿಗಳು ವಿದ್ಯುತ್‌ ಸಮಸ್ಯೆ ಪರಿಹರಿ ಸಲು ಆಗ್ರಹಿಸಿ ಸತ್ತ ಹಾವಿನೊಂದಿಗೆ ಪ್ರತಿಭಟನೆ ನಡೆಸಿ ಗಮನ ಸೆಳೆದರು.

‘ವಿದ್ಯುತ್‌ ಪರಿವರ್ತಕ ಸುಟ್ಟಿರುವುದರಿಂದ ಸುಮಾರು 15 ದಿನಗಳಿಂದ ಬಡಾವಣೆಯ ಮೇಲಿನ ಓಣಿಯಲ್ಲಿ ವಿದ್ಯುತ್‌ ಇಲ್ಲವಾಗಿದೆ. ಹಗಲು ಹೊತ್ತಿನಲ್ಲಿ ಹೇಗಾದರೂ ದಿನ ಕಳೆಯಬಹುದು. ಆದರೆ, ಈ ಮಳೆ ಗಾಲದ ರಾತ್ರಿ ಸಮಯದಲ್ಲಿ ಹಾವು, ಕ್ರಿಮಿಕೀಟಗಳಿಂದ ಭಯ ಆಗುತ್ತಿದೆ. ಈ ಸಂಬಂಧ ನಾಲ್ಕೈದು ಬಾರಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಿಲ್ಲ’ ಎಂದು ನಿವಾಸಿಗಳಾದ ಶಿವಕುಮಾರ, ಮಲ್ಲಿಕಾರ್ಜುನ, ಸಂಗಮೇಶ, ಸಿದ್ದಲಿಂಗ, ಶಾಮ, ಮಾಳಸಕಾಂತ ವಾಘೆ ಹೇಳಿದರು.

‘ಬುಧವಾರ ಬೆಳಿಗ್ಗೆ ಬಡಾವಣೆಯ ನಿವಾಸಿಯೊಬ್ಬರ ಮನೆಗೆ ಹಾವು ನುಸುಳಿದೆ. ಮನೆಯಲ್ಲಿನ ಸದಸ್ಯರಿಗೆ ಕಡಿಯುವುದೆಂಬ ಭಯದಿಂದ ಅದನ್ನು ಸಾಯಿಸಿ, ನಿವಾಸಿಗಳೆಲ್ಲರೂ ಸಿಟ್ಟಿನಿಂದ ಸತ್ತ ಹಾವಿನೊಂದಿಗೆ ಕೆಇಬಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದೇವೆ’ ಎಂದು ಅವರು ತಿಳಿಸಿದರು.

ADVERTISEMENT

‘ವಿದ್ಯುತ್‌ ಸಮಸ್ಯೆ ನಿವಾರಣೆಗಾಗಿ ವಿದ್ಯುತ್‌ ಪರಿವರ್ತಕ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಎಇಇ ಪಿ. ಗೋಖಲೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.