ADVERTISEMENT

ನರೇಗಾ ಕೂಲಿಕಾರರ ವಿಮೆ ಮಾಡಿಸಿ: ಗಿರೀಶ ಬದೋಲೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:36 IST
Last Updated 4 ಆಗಸ್ಟ್ 2025, 6:36 IST
ಬೀದರ್ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜಿ.ಪಂ.ಸಿಇಒ ಡಾ.ಗಿರೀಶ ಬದೋಲೆ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಇಇಗಳು, ಎಡಿಗಳು, ಪಿಡಿಒಗಳ ಸಭೆ ನಡೆಯಿತು
ಬೀದರ್ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜಿ.ಪಂ.ಸಿಇಒ ಡಾ.ಗಿರೀಶ ಬದೋಲೆ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಎಇಇಗಳು, ಎಡಿಗಳು, ಪಿಡಿಒಗಳ ಸಭೆ ನಡೆಯಿತು   

ಬೀದರ್: ಕೇಂದ್ರ ಸರ್ಕಾರವು ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಮೆ ಮಾಡಿಸಲು ಅವಕಾಶ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ ಬದೋಲೆ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿ ಇಒಗಳು, ಎಇಇಗಳು, ಎಡಿಗಳು, ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಈ ದಿಸೆಯಲ್ಲಿ ಜಿಲ್ಲೆಯ ನರೇಗಾ ಕೂಲಿಕಾರ್ಮಿಕರ ವಿಮೆ ಮಾಡಿಸಲು ಜಿಲ್ಲಾ ಪಂಚಾಯಿತಿಯಿಂದ ಅಭಿಯಾನ ಹಮ್ಮಿಕೊಳ್ಳಬೇಕು. ಜುಲೈ 18ರಿಂದ ಆಗಸ್ಟ್ 18ರವರೆಗೆ ನರೇಗಾ ಕೂಲಿಕಾರರ ವಿಮೆ ಮಾಡಿಸಲು ಅಭಿಯಾನ ಆಯೋಜಿಸಬೇಕು. ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ 5,04,890 ಗ್ರಾಮೀಣ ಕೂಲಿಕಾರರನ್ನು ವಿಮಾ ಯೋಜನೆಗಳಡಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು’ ಎಂದರು.

ADVERTISEMENT

‘ಇದಕ್ಕಾಗಿ ಕೇಂದ್ರ ಸರ್ಕಾರದ ಮೂರು ವಿಮಾ ಯೋಜನೆಗಳನ್ನು ಗುರುತಿಸಲಾಗಿದೆ. ಅವುಗಳ ವಿಮೆ ಮಾಡಿಸುವುದರಿಂದ ನರೇಗಾ ಕಾರ್ಮಿಕರಿಗೆ ಕೆಲಸದಲ್ಲಿ ಮೃತಪಟ್ಟಾಗ ಇಲ್ಲವೇ ಗಾಯಗೊಂಡಾಗ ಅವರಿಗೆ ನೆರವು ಸಿಗಲಿದೆ. ಈ ವಿಮಾ ಯೋಜನೆಗಳು ಕೂಲಿಕಾರರ ಬದುಕಿಗೆ ಭದ್ರತೆ ಒದಗಿಸಲಿವೆ. ಹೀಗಾಗಿ ವೈಯಕ್ತಿಕ ಆಸಕ್ತಿ ವಹಿಸಿ ಎಲ್ಲಾ ಕೂಲಿಕಾರರನ್ನು ವಿಮೆ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒಗಳು, ಸಹಾಯಕ ನಿರ್ದೇಶಕರು ಹಾಗೂ ಪಿಡಿಒಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ, ಪಿಆರ್‌ಇಡಿ ಕಾರ್ಯಪಾಲ ಎಂಜಿನಿಯರ್‌ ಶಿವಾಜಿ ಡೋಣಿ, ಎಇಇ ಖಲೀಮುದ್ದೀನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾಣಿಕರಾವ್ ಕೆರೂರ, ಅಧೀಕ್ಷಕ ಮಹ್ಮದ್ ಬಶೀರ್‌, ಡಿಪಿಎಂ ವಾಸೀಂ ಪರ್ವೇಜ್, ಎಡಿಪಿಸಿ ದೀಪಕ್ ಕಡಿಮನಿ, ಸಾಮಾಜಿಕ ಲೆಕ್ಕ ಪರಿಶೋಧನಾ ಜಿಲ್ಲಾ ವ್ಯವಸ್ಥಾಪಕ ದೇವಿದಾಸ್, ಗುರುರಾಜ, ಲೋಕೇಶ, ರಜನಿಕಾಂತ, ಅಂಬಿಕಾ, ಕೋಮಲ್, ಧನರಾಜ್ ಹಾಗೂ ಇನ್ನಿತರರು ಇದ್ದರು.

ವಿಮೆ ಮೂರು ಯೋಜನೆ ಗುರುತು

ನರೇಗಾ ಕಾರ್ಮಿಕರಿಗೆ ವಿಮೆ ಮಾಡಿಸಲು ಕೇಂದ್ರ ಸರ್ಕಾರದ ಈ ಕೆಳಗಿನ ಯೋಜನೆಗಳನ್ನು ಗುರುತಿಸಲಾಗಿದೆ. 1. ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆ (PMJJBY): ಈ ಯೋಜನೆಯಡಿ ವಾರ್ಷಿಕ ₹436 ವಿಮಾ ಕಂತು ಪಾವತಿಸಿದರೆ ₹2 ಲಕ್ಷ ಜೀವವಿಮೆ ಪಡೆಯಬಹುದು. ಗ್ರಾಮೀಣ ಪ್ರದೇಶದ 18ರಿಂದ 50 ವಯೋಮಾನದ ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರು. 2. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY): ಈ ಯೋಜನೆಯಡಿ ವಾರ್ಷಿಕ ₹20 ವಿಮಾ ಕಂತು ಪಾವತಿಸುವ 18 ರಿಂದ 70 ವಯೋಮಾನದವರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ಅಪಘಾತದ ಸಂದರ್ಭದಲ್ಲಿ ₹2 ಲಕ್ಷಗಳವರೆಗೆ ವಿಮೆ ಪಡೆಯಬಹುದು. 3. ಪ್ರಧಾನ ಮಂತ್ರಿ ಆರೋಗ್ಯ ಯೋಜನೆ: ಸರ್ಕಾರದಿಂದ ಗುರುತಿಸಲಾದ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ನೋಂದಾಯಿತ ಕುಟುಂಬಗಳಿಗೆ ವಾರ್ಷಿಕ ₹5 ಲಕ್ಷಗಳ ವರೆಗೆ ನಗದು ರಹಿತ ವೈದ್ಯಕೀಯ ಸೌಲಭ್ಯನೀಡಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.