ADVERTISEMENT

ಬೀದರ್‌: ಪಿಯು ಟೇಬಲ್‌ ಟೆನಿಸ್‌ ಟೂರ್ನಿ ಆರಂಭ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:07 IST
Last Updated 31 ಅಕ್ಟೋಬರ್ 2025, 7:07 IST
ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ ಪಂದ್ಯಾವಳಿಯ ಬಾಲಕಿಯರ ವಿಭಾಗದ ಪಂದ್ಯ ಗಮನಿಸಿದ ಡಿಡಿಪಿಯು ಚಂದ್ರಕಾಂತ ಶಹಾಬಾದಕರ್‌
ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ ಪಂದ್ಯಾವಳಿಯ ಬಾಲಕಿಯರ ವಿಭಾಗದ ಪಂದ್ಯ ಗಮನಿಸಿದ ಡಿಡಿಪಿಯು ಚಂದ್ರಕಾಂತ ಶಹಾಬಾದಕರ್‌   

ಬೀದರ್‌: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಅಲ್ಲಮಾ ಇಕ್ಬಾಲ್ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನಗರದ ಶಾಹೀನ್‌ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 2025-26ನೇ ಸಾಲಿನ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಟೇಬಲ್ ಟೆನಿಸ್‌ ಟೂರ್ನಿ ಗುರುವಾರ ಆರಂಭಗೊಂಡಿತು.

ಪಂದ್ಯಾವಳಿಯಲ್ಲಿ ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು 26 ಜಿಲ್ಲೆಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆ. ಮೊದಲ ದಿನ ಅರ್ಹತಾ ಸುತ್ತು, ಕ್ವಾರ್ಟರ್‌ಫೈನಲ್‌ ಪಂದ್ಯಗಳು ನಡೆದವು.

ಬಾಲಕಿಯರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಚಿಕ್ಕಮಗಳೂರು ತಂಡದ ವಿರುದ್ಧ ಜಯಗಳಿಸಿದ ಬೆಂಗಳೂರು ಉತ್ತರ ಜಯಗಳಿಸಿ ಸೆಮಿಫೈನಲ್‌ ಪ್ರವೇಶಿಸಿತು. ಇನ್ನೊಂದು ಪಂದ್ಯದಲ್ಲಿ ಕೊಡಗು ವಿರುದ್ಧ ಉಡುಪಿ ವನಿತೆಯರು ಜಯಭೇರಿ ಬಾರಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟರು. ಮತ್ತೊಂದು ಪಂದ್ಯದಲ್ಲಿ ಉಡುಪಿ ವಿರುದ್ಧ ಬೆಂಗಳೂರು ದಕ್ಷಿಣ ತಂಡ ಗೆಲುವು ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿತು. ಇನ್ನೊಂದು ಕ್ವಾರ್ಟರ್‌ ಫೈನಲ್‌ ಪಂದ್ಯ ಶುಕ್ರವಾರ (ಅ.31) ನಡೆಯಲಿದೆ. ಬಾಲಕರ ವಿಭಾಗದ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ಶುಕ್ರವಾರ ನಡೆಯಲಿವೆ.

ADVERTISEMENT

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯ್ಕ ಪಂದ್ಯಾವಳಿ ಉದ್ಘಾಟಿಸಿ, ಸೋಲು ಮತ್ತು ಗೆಲುವು ಎರಡೂ ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಉತ್ತಮ ಆರೋಗ್ಯ ಇದ್ದರೆ ಉತ್ತಮವಾಗಿ ಓದಬಹುದು. ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಶಹಾಬಾದಕರ್‌ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ನಿಯಮಗಳನ್ನು ಪಾಲಿಸಿಕೊಂಡು ನೈತಿಕವಾಗಿ ಆಟವಾಡಬೇಕು. ರೆಫ್ರಿಗಳು ನಿಷ್ಪಕ್ಷಪಾತವಾಗಿ ನಿರ್ಣಯ ನೀಡಿ ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಹಿನ್ ಶಿಕ್ಷಣ ಸಮೂಹ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಹಸೀಬ್, ನಿರ್ದೇಶಕಿ ಶಹಿಸ್ತಾ, ಜಕಿಯಾ ಫಾತಿಮಾ, ಅಲ್ಲಮಾ ಇಕ್ಬಾಲ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಖಾಜಾ ಪಟೇಲ್, ಬೀದರ್ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭು ಎಸ್., ಕಾರ್ಯಾಧ್ಯಕ್ಷ ಮನ್ಮಥ್ ಡೋಳೆ, ರಾಜ್ಯ ಪ್ರತಿನಿಧಿ ಬಾಲಾಜಿ ವಾಡೇಕರ್, ಉಪನ್ಯಾಸಕರ ಸಂಘದ ಅಧ್ಯಕ್ಷ ಓಂಕಾಂತ ಸೂರ್ಯವಂಶಿ, ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಹೆಡಗಾಪೂರ ಇದ್ದರು.

ದೈಹಿಕ ಶಿಕ್ಷಣ ಉಪನ್ಯಾಸಕರಾದ ಸಂಜಯ್ ಜೆಸ್ಸಿ, ಅಬ್ದುಲ್ ಖಾದರ್, ನಾಗನಾಥ ಬಿರಾದಾರ, ಧನರಾಜ ಬಿರಾದಾರ, ಬಸವರಾಜ ಬಿರಾದಾರ, ಅನಿಲ್ ನಾಟಿಕರ್, ಶಿವಶರಣಪ್ಪ ನಾಟಿಕರ್, ಶಿವಶರಣಪ್ಪ ದೇಸಾಯಿ, ಪೂಜಾ ಇಂಗಳೆ, ಕಾಳಿದಾಸ ಬಿರಾದಾರ, ರೆಫ್ರಿಗಳಾದ ವಿಶಾಲ್‌ ಸಿಂಗ್‌ ಪವಾರ್‌, ವೀರೇಶ ವಡ್ಡಿ, ಇಸ್ಮಾಯಿಲ್‌, ಜಾವೇದ್‌ ಇದ್ದರು.

ಕ್ರೀಡಾಕೂಟದ ವೀಕ್ಷಕರಾಗಿ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ಬೆಂಗಳೂರು ಕಚೇರಿಯ ಗೋಪಾಲ ಕೃಷ್ಣ ಹಾಜರಿದ್ದರು. ಚಂದ್ರಕಾಂತ ಗಂಗಶೆಟ್ಟಿ ಸ್ವಾಗತಿಸಿದರೆ, ಪ್ರಾಚಾರ್ಯ ಓಂ ಪ್ರಕಾಶ ದಡ್ಡೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.