ಭಾಲ್ಕಿ: ‘ಗೋಲ್ಡನ್ ಸ್ಕಾಲರ್‌ಶಿಪ್ ಯೋಜನೆ ಅಡಿಯಲ್ಲಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಪಟ್ಟದ್ದೇವರ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಅನುಭವ ಮಂಟಪದಲ್ಲಿ ಗೋಲ್ಡನ್ ಸ್ಕಾಲರ್‌ಶಿಪ್ ಯೋಜನೆ ಅಡಿಯಲ್ಲಿ ಪಿಯುಸಿ ಪ್ರಥಮ ಮತ್ತು 6ನೇ ತರಗತಿಯ ಉಚಿತ ಶಿಕ್ಷಣಕ್ಕಾಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಈಚೆಗೆ ಸನ್ಮಾನಿಸಿ ಮಾತನಾಡಿದರು.
ನಮ್ಮ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಪ್ರತಿವರ್ಷ ಗೋಲ್ಡನ್ ಸ್ಕಾಲರ್ ಶಿಪ್ ಪರೀಕ್ಷೆ ನಡೆಸಿ, ಸುಮಾರು ನೂರು ವಿದ್ಯಾರ್ಥಿಗಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುತ್ತಿರುವ ಪಟ್ಟದ್ದೇವರ ಕಾರ್ಯ ಮಾದರಿ ಎಂದು ತಿಳಿಸಿದರು.
ಪ್ರಸಕ್ತ ವರ್ಷ ಕನ್ನಡ ಮಾಧ್ಯಮ ಶಾಲೆಗಳನ್ನು ಉತ್ತೇಜಿಸುವ ಸಂಬಂಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸುಮಾರು 30 ವಿದ್ಯಾರ್ಥಿಗಳಿಗೆ 6ರಿಂದ 10ನೇ ತರಗತಿವರೆಗೆ ವಸತಿ ಸಹಿತ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿರುವುದು ಗ್ರಾಮೀಣ, ಬಡ, ಜಾಣ ವಿದ್ಯಾರ್ಥಿಗಳಿಗೆ ವರವಾಗಿ ಪರಿಣಮಿಸಿದೆ ಎಂದು ನುಡಿದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ನಮ್ಮ ಶಾಲೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ ಕೊಡಲಾಗಿದೆ. ಶಿಕ್ಷಕರ, ಉಪನ್ಯಾಸಕರ ಉತ್ತಮ ಬೋಧನೆ ವಿದ್ಯಾರ್ಥಿಗಳ ಮೇರು ಸಾಧನೆಗೆ ಸಹಕಾರಿ ಆಗಿದೆ ಎಂದರು.
ಹಿರೇಮಠದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಶಿವಾನಂದ ನಾವಲಗಿಮಠ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.