
ಹುಲಸೂರ: ‘ಸಮಾಜದ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಸಾಹಿತ್ಯ ಮತ್ತು ಪ್ರಕಾಶನ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದು’ ಎಂದು ಪ್ರಥಮ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷ ಬಸವರಾಜ ಜಿ.ಕೊನೇಕ್ ಹೇಳಿದರು.
ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಉರಿಲಿಂಗಪೆದ್ದಿ ಸಾಂಸ್ಕೃತಿಕ–ಸಾಹಿತ್ಯಿಕ ವೇದಿಕೆಯ ಆಶ್ರಯದಲ್ಲಿ ನಡೆದ ಶರಣ ಉರಿಲಿಂಗಪೆದ್ದಿ ಉತ್ಸವ, ಶಿವಲಿಂಗೇಶ್ವರ ಶಿವಯೋಗಿಗಳ 57ನೇ ಸ್ಮರಣೋತ್ಸವ ಹಾಗೂ ಪ್ರಥಮ ಪ್ರಕಾಶಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಶರಣ ಪರಂಪರೆಯ ಮೌಲ್ಯಾಧಾರಿತ ಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧಿಸಿ, ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವ ಹೊಣೆಗಾರಿಕೆ ಪ್ರಕಾಶಕರ ಮೇಲಿದೆ. ವಾಣಿಜ್ಯ ದೃಷ್ಟಿಯೊಂದಿಗೆ ಸಾಮಾಜಿಕ ಬದ್ಧತೆಯೂ ಪ್ರಕಾಶನ ಕ್ಷೇತ್ರಕ್ಕೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.
ಉರಿಲಿಂಗಪೆದ್ದಿ ಮಠದ ಇತಿಹಾಸ ಸ್ಮರಿಸಿದ ಅವರು, ಗಡಿನಾಡಿನ ನೆಲದಲ್ಲಿ ಈ ಮಠ ಕನ್ನಡ ಹಾಗೂ ವಚನ ಸಾಹಿತ್ಯವನ್ನು ಬೆಳೆಸುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗವಿಸಿದ್ದಪ್ಪ ಪಾಟೀಲ, ‘ಉರಿಲಿಂಗಪೆದ್ದಿ ಮಠವು ಕಳೆದ 18 ವರ್ಷಗಳಿಂದ ನಿರಂತರವಾಗಿ ಉತ್ಸವ ಹಾಗೂ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡು ಕಲೆ–ಸಾಹಿತ್ಯ–ಸಂಸ್ಕೃತಿಯ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಸಾಹಿತ್ಯ ಕ್ಷೇತ್ರಕ್ಕೆ ಮಠದ ಕೊಡುಗೆ ಅಪಾರ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಕಾಶಕ ಪ್ರಕಾಶ ಕಂಬತ್ತಳಿ, ‘ಸಮಾಜದ ಬೌದ್ಧಿಕ ವಿಕಾಸದಲ್ಲಿ ಸಾಹಿತ್ಯ ಮತ್ತು ಪ್ರಕಾಶನ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಸರ್ಕಾರ ಪ್ರಕಾಶಕರಿಗೆ ಅನುದಾನ, ತೆರಿಗೆ ರಿಯಾಯಿತಿ ಹಾಗೂ ಪುಸ್ತಕ ಖರೀದಿ ಮೂಲಕ ಬೆಂಬಲ ನೀಡಬೇಕು’ ಎಂದು ಆಗ್ರಹಿಸಿದರು.
ಬಸವಲಿಂಗ ಪಟ್ಟದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಲಿಂಗಾಯತ ಧರ್ಮ ಪ್ರಚಾರಕ ಶಿವಾನಂದ ಹೈಬತಪುರೆ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಉರಿಲಿಂಗಪೆದ್ದಿಯವರ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 40 ಮಂದಿಗೆ ‘ಕರುನಾಡ ಸಿರಿ ಧರಿಸಿರಿ’ ಹಾಗೂ ‘ಧರಿಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾಯಗಾಂವನ ಶಿವಾನಂದ ಸ್ವಾಮೀಜಿ, ತಹಸೀಲ್ದಾರ್ ಶಿವಾನಂದ ಮೇತ್ರೆ, ಕೃಷ್ಣಮೂರ್ತಿ, ಅಪ್ಪರಾವ ಅಕ್ಕೋಣಿ, ಜಯದೇವಿ ಗಾಯಕವಾಡ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾಣೇಕರ, ಮಹಾಲಿಂಗ ದೇವರು, ಸಂಧ್ಯಾ ಕಾಣೇಕರ, ಆಕಾಶ ಖಂಡಾಳೆ, ಕಾಳಿದಾಸ ಸೂರ್ಯವಂಶಿ, ಆರಿಫ್ ಪಟೇಲ್ ಸೇರಿದಂತೆ ಸಾಹಿತಿಗಳು, ಚಿಂತಕರು, ರಾಜಕೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವೈಭವದ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಡೆದ ಮೆರವಣಿಗೆಗೆ ಸಮ್ಮೇಳನದ ಅಧ್ಯಕ್ಷ ಬಸವರಾಜ ಜಿ. ಕೊನೇಕ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಿಂದ ಆರಂಭವಾದ ಮೆರವಣಿಗೆಯಲ್ಲಿ ಹೂಗಳಿಂದ ಸಿಂಗರಿಸಿದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾವಚಿತ್ರಗಳು ಗಮನ ಸೆಳೆದವು. ತೆರೆದ ವಾಹನದಲ್ಲಿ ವಚನ ಸಾಹಿತ್ಯ, ಉರಿಲಿಂಗಪೆದ್ದಿ ಹಾಗೂ ಲಿಂ. ಶಿವಲಿಂಗೇಶ್ವರ ಶಿವಯೋಗಿಗಳ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಅಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಅಧ್ಯಕ್ಷರು ಕುಳಿತಿದ್ದರು.
ಬಗದಲ ತಾಂಡಾದ ಲಂಬಾಣಿ ನೃತ್ಯ, ಉಡಮನಳ್ಳಿ ಹಾಗೂ ಬೆಮ್ಮಲಕೇಡ ಗ್ರಾಮದ ಭಜನಾ ತಂಡಗಳ ಪ್ರದರ್ಶನ, ತೊಟ್ನಾಳಿ ಗ್ರಾಮದ ತಮಟೆ ವಾದ್ಯ, ಶೆಡೊಳ ಗ್ರಾಮದ ಮುಖವಾಡ ಕಲಾವಿದರು, ರಮಬಾಯಿ ಮಹಿಳಾ ಸಂಘದ ಲೆಜಿಮ್ ಪ್ರದರ್ಶನಗಳು ಗಮನ ಸೆಳೆದವು.
ಸಮ್ಮೇಳನದ ಹಕ್ಕೊತ್ತಾಯಗಳು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಪ್ರತಿವರ್ಷ ಒಬ್ಬ ಪ್ರಕಾಶಕರನ್ನು ಸದಸ್ಯರಾಗಿ ಪರಿಗಣಿಸಿ ಪ್ರಕಾಶಕರಿಗೆ ಕಡ್ಡಾಯವಾಗಿ ಒಂದು ಪ್ರಶಸ್ತಿ ನೀಡಬೇಕು ಪ್ರಕಾಶಕರ ಪುಸ್ತಕ ಖರೀದಿಗೆ ಏಕಗವಾಕ್ಷಿ ಅಡಿಯಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟು ಕನ್ನಡ ಪುಸ್ತಕ ಪ್ರಾಧಿಕಾರ ತಕ್ಷಣ ಪುಸ್ತಕ ಖರೀದಿ ಆರಂಭಿಸಬೇಕು. ಪ್ರತಿವರ್ಷ ಪ್ರಕಾಶಕರ ಸಮ್ಮೇಳನ ಆಯೋಜಿಸಬೇಕು ಪಠ್ಯಪುಸ್ತಕಗಳಲ್ಲಿ ಪ್ರಕಾಶಕರ ಜೀವನಚರಿತ್ರೆ ಹಾಗೂ ಪ್ರಕಾಶನ ಪರಂಪರೆ ಸೇರಿಸಬೇಕು. ಪ್ರಕಾಶಕರು ಮುದ್ರಕರು ಡಿಟಿಪಿ ಮತ್ತು ಮುಖಪುಟ ವಿನ್ಯಾಸಕರಿಗೆ ಉಚಿತ ಬಸ್–ರೈಲ್ವೆ ಪಾಸ್ ಹಾಗೂ ಸರ್ಕಾರಿ ಭದ್ರತೆ ಒದಗಿಸಬೇಕು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪ್ರತಿವರ್ಷ ಪ್ರಕಾಶಕರ ಹಾಗೂ ಲೇಖಕರ 500 ಕೃತಿಗಳ ಖರೀದಿ ಕಡ್ಡಾಯಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.