ಬಸವಕಲ್ಯಾಣ: ‘ಬಸವಣ್ಣನವರ ಬಗ್ಗೆ ಮಾತನಾಡಿದರೆ ಸಾಕಾಗುವುದಿಲ್ಲ. ಹೇಳಿದಷ್ಟೂ ಕಡಿಮೆ ಎನಿಸುತ್ತದೆ. ಅವರು ನಿಜವಾಗಿಯೂ ವಿಶ್ವಗುರು. ಆದರೆ, ಅವರ ತತ್ವಗಳನ್ನು ನಿಷ್ಠೆಯಿಂದ ಪಾಲಿಸುವವರ ಕೊರತೆಯಿದೆ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ನಗರದ ಬಸವ ಮಹಾಮನೆಯಲ್ಲಿ ಬಸವಧರ್ಮ ಪೀಠದಿಂದ ಶುಕ್ರವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೆಕ್ಕಾದಂತೆ ಕಲ್ಯಾಣ ಆಗಬೇಕು. ಇಲ್ಲೆಲ್ಲ ಬಸವತತ್ವದಂತೆ ನಡೆಯುವವರು ಇರಬೇಕು. ಎಲ್ಲರನ್ನೂ ಸಮಾನರಾಗಿ ಕಾಣಬೇಕು. ದೇವರು ನಿಮ್ಮಲ್ಲಿಯೇ ಇದ್ದಾರೆಂದು ಬಸವಣ್ಣನವರು ತೋರಿಸಿದರು. ವೈಚಾರಿಕತೆಯ ವಚನಸಾಹಿತ್ಯ ನೀಡಿದರು. ಆದರೆ, ಅವರ ಧ್ವಜ ಹಿಡಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ನಗರದಲ್ಲಿನ ₹800 ಕೋಟಿಯ ಅನುಭವ ಮಂಟಪ ಉದ್ಘಾಟನೆಗೂ ಮೊದಲು ಲಿಂಗಾಯತರ ಎಲ್ಲ ಬೇಡಿಕೆಗಳು ಈಡೇರಿಸುವಂತೆ ಮುಖ್ಯಮಂತ್ರಿಯವರಿಗೆ ವಿನಂತಿಸುತ್ತೇನೆ’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಶರಣತತ್ವ ಆಚರಿಸಿದರೆ ಮಾತ್ರ ಅದರ ಶಕ್ತಿ ಗೋಚರಿಸುತ್ತದೆ. ಸತ್ಯ, ಶುದ್ಧ, ಕಾಯಕ ಮತ್ತು ದಾಸೋಹ ಕೈಗೊಳ್ಳಬೇಕು. ಆದರೆ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ದಾರಿ ತಪ್ಪಿಸುತ್ತಿದೆ. ವಿಭೂತಿ, ಲಿಂಗಧಾರಣೆ ಮರೆಯುತ್ತಿದ್ದೇವೆ’ ಎಂದು ಹೇಳಿದರು.
ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ‘ಮುಸ್ಲಿಂ, ಸಿಖ್ ಮತ್ತಿತರೆ ಧರ್ಮೀಯರು ಧರ್ಮಗುರುಗಳನ್ನು ಮರೆತಿಲ್ಲ. ಆದರೆ, ಲಿಂಗಾಯತರಲ್ಲಿ ಬಹಳಷ್ಟು ಜನರು ಬಸವತತ್ವಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವುದು ಖೇದಕರ. ಶರಣರು ನಮಗಾಗಿ ತಮ್ಮ ಬದುಕು ಸವೆಸಿದರು. ತ್ಯಾಗ, ಬಲಿದಾನಗೈದಿರುವುದು ಮರೆಯಲಾಗದು’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ‘ಬಸವಣ್ಣನವರ ಸಮಬಾಳು ತತ್ವದ ಆಧಾರದಲ್ಲಿಯೇ ರಾಜ್ಯ ಸರ್ಕಾರ ಪಂಚ್ ಗ್ಯಾರಂಟಿ ಯೋಜನೆ ಘೋಷಿಸಿದೆ. ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ನಮ್ಮತಾಯಿ ಅಪ್ಪಟ ಬಸವಭಕ್ತರು. ಬಸವತತ್ವ ಜಾತಿಗೆ ಸೀಮಿತವಲ್ಲ’ ಎಂದು ಹೇಳಿದರು.
ರಾಜ್ಯ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಲಿಂ.ಮಾತೆ ಮಹಾದೇವಿಯವರು ಶರಣಮೇಳ ಮತ್ತು ಕಲ್ಯಾಣಪರ್ವ ಆರಂಭಿಸಿ ಲಿಂಗಾಯತರನ್ನು ಬಸವಸೂತ್ರದಲ್ಲಿ ಬಂಧಿಸಿ ಇತರೆ ದೇವಸ್ಥಾನಗಳಿಗೆ ಹೋಗುವುದನ್ನು ತಡೆದರು’ ಎಂದು ಹೇಳಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ, ಬಸವರಾಜ ಬುಳ್ಳಾ, ಶಿವರಾಜ ನರಶೆಟ್ಟಿ, ಅಲ್ಲಮಗಿರಿ ಬಸವಕುಮಾರ ಸ್ವಾಮೀಜಿ, ಶಿವರಾಜ ಪಾಟೀಲ ಕಲಬುರಗಿ, ಸುರೇಶಕುಮಾರ ಸ್ವಾಮಿ, ಶ್ರೀಕಾಂತ ಭೂರಾಳೆ ಮಾತನಾಡಿದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕಂಟೆಪ್ಪ ಗಂಧಿಗುಡಿ, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ರಾಷ್ಟ್ರೀಯ ಬಸವದಳದ ತಾಲ್ಲೂಕು ಅಧ್ಯಕ್ಷ ರವೀಂದ್ರ ಕೊಳಕೂರ, ಆಕಾಶ ಖಂಡಾಳೆ, ಸೋಮನಾಥ ಜ್ಯಾಂತೆ, ರಾಜೇಂದ್ರಕುಮಾರ ಗಂದಗೆ ಮತ್ತಿತರರು ಇದ್ದರು. ಶಿವಲೀಲಾ ಸುನಿಲ ಗಂಧಿಗುಡಿ ವಚನ ನೃತ್ಯ ಪ್ರದರ್ಶಿಸಿದರು.
ಲಿಂಗಾಯತ ಧರ್ಮ ಮಾನ್ಯತೆಯ ಪ್ರಸ್ತಾಪ ಕೇಂದ್ರ ಸರ್ಕಾರ ತಿರಸ್ಕರಿಸದೆ ಹಿಂದಿರುಗಿಸಿದೆ. ಆದ್ದರಿಂದ ರಾಜ್ಯ ಸರ್ಕಾರ ಪುನಃ ಪರಿಶೀಲನೆಗೆ ಪ್ರಧಾನಿಗೆ ಕಳುಹಿಸಬೇಕುಬಸವರಾಜ ಬುಳ್ಳಾ ಗೌರವ ಅಧ್ಯಕ್ಷ ಕಲ್ಯಾಣ ಪರ್ವ ಸ್ವಾಗತ ಸಮಿತಿ
‘ಈಶ್ವರ ಖಂಡ್ರೆ ರಾಜಶೇಖರ ಪಾಟೀಲ ಪ್ರಯತ್ನ’
ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಮಾತನಾಡಿ ‘ಈಶ್ವರ ಖಂಡ್ರೆ ಹಾಗೂ ನಾನು ಮೊದಲಿನಿಂದಲೂ ನಿರಂತರವಾಗಿ ಹೋರಾಟ ಕೈಗೊಂಡಿದ್ದರ ಫಲವಾಗಿ ಬೃಹತ್ ಅನುಭವ ಮಂಟಪ ನಿರ್ಮಾಣ ಆಗುತ್ತಿದೆ. ಸರ್ಕಾರ ಇದಕ್ಕಾಗಿ ಮತ್ತೆ ₹ 50 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವರ್ಷ ಈ ಮಂಟಪ ಲೋಕಾರ್ಪಣೆಗೊಳಿಸುವರು. ವಚನ ವಿಶ್ವವಿದ್ಯಾಲಯ ಆರಂಭಿಸಲಾಗುವುದು ಎಂದು ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಯಾತ್ರೆಯ ಸಮಾರೋಪದಲ್ಲಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.