ಬೀದರ್: ನಗರ ಸೇರಿದಂತೆ ಹಲವೆಡೆ ಸುರಿದ ಬಿರುಗಾಳಿ ಸಹಿತ ಜೋರು ಮಳೆಯಿಂದ ಭಾನುವಾರ ವಾತಾವರಣ ಸಂಪೂರ್ಣ ತಂಪಾಗಿದೆ.
ಮಧ್ಯಾಹ್ನ 3.30ರ ಸುಮಾರಿಗೆ ಆರಂಭಗೊಂಡ ಮಳೆ ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಕೆಂಡದಂತಹ ಬಿಸಿಲಿಗೆ ಜನ ಬೇಸತ್ತು ಹೋಗಿದ್ದರು. ಆದರೆ, ಭಾನುವಾರ ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದ ಇಳೆ ತಂಪಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ 40ರಿಂದ 42 ಡಿಗ್ರಿ ಸೆಲ್ಸಿಯಸ್ ನಡುವೆ ಬಿಸಿಲು ಇರುತ್ತಿದೆ. ಶನಿವಾರ ತಡರಾತ್ರಿ ದಟ್ಟ ಕಾರ್ಮೋಡ ಕವಿದಿತ್ತು. ಭಾರಿ ಗುಡುಗು ಮಿಂಚು ಇತ್ತು. ಆದರೆ, ಒಂದೆರಡು ನಿಮಿಷ ತುಂತುರು ಮಳೆಯಾಗಿ ಸೆಕೆ ಮತ್ತಷ್ಟು ಹೆಚ್ಚಾಗಿತ್ತು. ಭಾನುವಾರ ಬೆಳಗಿನಿಂದ ಮೋಡ, ಆಗಾಗ ಬಿಸಿಲು ಕಾಣಿಸಿಕೊಂಡಿತ್ತು. ಆದರೆ, ಮಧ್ಯಾಹ್ನ ಏಕಾಏಕಿ ಭಾರಿ ಬಿರುಗಾಳಿಯೊಂದಿಗೆ ವರ್ಷಧಾರೆಯಾಗಿದೆ.
ತಾಲ್ಲೂಕಿನ ಅಮಲಾಪುರ, ಚಿಟ್ಟಾ, ವಾಡಿ, ಗೊಡಂಪಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ. ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್‌ನಲ್ಲಿ ಕೆಲ ನಿಮಿಷ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.