ADVERTISEMENT

ಓದುವ ಮಂಟಪ ಸಾಹಿತ್ಯ ಚಿಂತನ ಕಾರ್ಯಕ್ರಮ: ಕಥೆಗಾರ ಗುರುನಾಥ ಅಕ್ಕಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:52 IST
Last Updated 15 ಜುಲೈ 2025, 7:52 IST
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕಥೆಗಾರ ಗುರುನಾಥ ಅಕ್ಕಣ್ಣ ಉದ್ಘಾಟಿಸಿದರು
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಕಥೆಗಾರ ಗುರುನಾಥ ಅಕ್ಕಣ್ಣ ಉದ್ಘಾಟಿಸಿದರು   

ಬೀದರ್‌: ‘ಪುಸ್ತಕಗಳನ್ನು ಓದುವುದರಿಂದ ಬದುಕಿನಲ್ಲಿ ಸಂತಸ ಹೆಚ್ಚುತ್ತದೆ. ಆಯುಷ್ಯವೂ ವೃದ್ಧಿಯಾಗುತ್ತದೆ’ ಎಂದು ಕಥೆಗಾರ ಗುರುನಾಥ ಅಕ್ಕಣ್ಣ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್‌ ತಾಲ್ಲೂಕು ಘಟಕ ನಗರದಲ್ಲಿ ಆಯೋಜಿಸಿದ್ದ ಓದುವ ಮಂಟಪ ಸಾಹಿತ್ಯ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಪುಸ್ತಕ ಓದುವ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮೊಬೈಲ್‌ ದಾಸ್ಯದಿಂದ ಯುವಜನತೆಯನ್ನು ಹೊರತಂದು ಅವರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು’ ಎಂದು ಹೇಳಿದರು.

ADVERTISEMENT

ಸಾಹಿತಿ ರಜಿಯಾ ಬಳಬಟ್ಟಿ ಮಾತನಾಡಿ,‘ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಧ್ವನಿಯಾಗಿ, ಮೌಢ್ಯ ವಿರೋಧಿಯಾಗಿ, ಪ್ರಗತಿಪರ ಎದೆಗಾರಿಕೆಯಾಗಿ ಬಾನು ಮುಸ್ತಾಕ್ ಅವರ ಕಥೆ ಮಹತ್ವದ್ದಾಗಿವೆ. ಪಿತೃಪ್ರಧಾನ ಸಮಾಜದ ಗಂಡಿನ ದರ್ಪ, ಹೆಣ್ಣುಮಕ್ಕಳ ನೋವನ್ನು ಅತ್ಯಂತ ಧ್ವನಿಪೂರ್ಣವಾಗಿ ನುಡಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಧನರಾಜ ತುಡುಮೆ,‘ಸಣ್ಣ ಕತೆ ಬಾನು ಮುಸ್ತಾಕ್ ಅವರ ಆತ್ಮಕ್ಕೆ ಹತ್ತಿರವಾದ ಮಾಧ್ಯಮ. ಈ ಮಾಧ್ಯಮದ ಮೂಲಕ ಬಾನು ಅವರು ಮಹಿಳೆಯರ ಮೇಲೆ ನಡೆಯುವ ಅಮಾನುಷ ದೌರ್ಜನ್ಯ, ಅವರ ನೋವು, ಸಂಘರ್ಷ ಅಸಹಾಯಕತೆಗಳ ಕುರಿತು ಮನಮುಟ್ಟುವಂತೆ ಬರೆದಿದ್ದಾರೆ’ ಎಂದು ಹೇಳಿದರು.

ಪರಿಷತ್ತಿನ ಅಧ್ಯಕ್ಷ ಟಿ.ಎಂ.ಮಚ್ಚೆ ಮಾತನಾಡಿ,‘ಡಿಜಿಟಲ್ ಕಾಲಘಟ್ಟದಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇಂಥ ಕೃತಿಗಳು ಓದುಗರ ಸಂಖ್ಯೆ ದ್ವಿಗುಣಗೊಳಿಸುವ ಆಶಾಭಾವನೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಸಹೃದಯರು ಹಾಗೂ ಸಾಹಿತಿಗಳ ಸಹಭಾಗಿತ್ವ ಅಗತ್ಯ’ ಎಂದರು.

ಕರ್ನಾಟಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಸವರಾಜ ಬಲ್ಲೂರ,‘ಸೃಜನಶೀಲ, ಸಂವೇದನಾಶೀಲ ಮನಸ್ಸುಗಳಿಗೆ ಓದು ಮುಖ್ಯ. ಓದುವುದೆಂದರೆ ಒಬ್ಬ ಲೇಖಕನನ್ನು ಸಂವಾದಗೊಳಿಸುವುದು. ಒಬ್ಬರ ಅನುಭವ ಮತ್ತೊಬ್ಬರ ಅನುಭವದೊಂದಿಗೆ ಮುಖಾಮುಖಿಗೊಳಿಸುವುದು’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಪಾರ್ವತಿ ವಿ.ಸೋನಾರೆ ಅವರು ‘ಎದೆಯ ಹಣತೆ’ ಬಗ್ಗೆ ವಿವರಿಸಿದರು.

ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಸಾಹಿತಿಗಳಾದ ಎಸ್.ಎಂ ಜನವಾಡಕರ್, ಈಶ್ವರಯ್ಯ ಕೊಡಂಬಲ್, ರಾಮಚಂದ್ರ ಗಣಾಪುರ, ವಿದ್ಯಾವತಿ ಬಲ್ಲೂರ, ರೂಪಾ ಪಾಟೀಲ, ಪ್ರೊ.ಜಗನ್ನಾಥ ಕಮಲಾಪುರೆ, ನರಸಪ್ಪ ಗೌನಳ್ಳಿ, ಬಾಪು ಮಡಕಿ. ಶಿವಪುತ್ರಪ್ಪ ಡಿ. ಪಾಟೀಲ, ಬಾಬುರಾವ ದಾನಿ ಇದ್ದರು. ಪರಿಷತ್ತಿನ ತಾಲ್ಲೂಕು ಕೋಶಾಧ್ಯಕ್ಷ ದೇವೇಂದ್ರ ಕರಂಜೆ ನಿರೂಪಿಸಿದರು. ಕಾರ್ಯದರ್ಶಿ ವೀರಶಟ್ಟಿ ಚನಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ ಜಾಬಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.