ADVERTISEMENT

Mother's Day: ಗೆಳೆಯರ ಬಳಗದಿಂದ ‘ತಾಯಂದಿರಿಗೆ ಗೌರವ’

ವಡಗಾಂವ್‌ನಲ್ಲಿ ತಾಯಂದಿರ ದಿನ

​ಪ್ರಜಾವಾಣಿ ವಾರ್ತೆ
Published 11 ಮೇ 2025, 16:20 IST
Last Updated 11 ಮೇ 2025, 16:20 IST
ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮಹಿಳೆಯರನ್ನು ಗೌರವಿಸಲಾಯಿತು
ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮಹಿಳೆಯರನ್ನು ಗೌರವಿಸಲಾಯಿತು   

ಔರಾದ್: ತಾಲ್ಲೂಕಿನ ವಡಗಾಂವ್ ಗ್ರಾಮದ ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಗೆಳೆಯರ ಬಳಗದಿಂದ ಭಾನುವಾರ ಮಹಿಳೆಯರನ್ನು ಗೌರವಿಸುವ ಮೂಲಕ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.

ವಡಗಾಂವ್, ಬೋರ್ಗಿ, ಸೋರಳ್ಳಿ, ಆಲೂರ್ ಗ್ರಾಮದ ವಿವಿಧ ಸಮುದಾಯದ ಮಹಿಳೆಯರನ್ನು ಆಹ್ವಾನಿಸಿ ಸತ್ಕರಿಸಿ ನೆನಪಿನ ಕಾಣಿಕೆ ನೀಡಿದರು. ಇದೇ ವೇಳೆ ಎಸ್ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು.

‘ತೀರಾ ಬಡತನದಲ್ಲಿ ನನ್ನ ತಾಯಿ ನಸೀಮಾ ಬೇಗಂ ನನಗೆ ಕಷ್ಟಪಟ್ಟು ಓದಿಸಿದ್ದಾರೆ. ಉಪನ್ಯಾಸಕಿ ಲತಾ ದಂಡೆ ಅವರು ನನ್ನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿರುವುದರಿಂದ ನಾನು ಇಂದು ಕೆಎಎಸ್ ಪಾಸು ಮಾಡಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಲು ಸಾಧ್ಯವಾಗಿದೆ. ಈ ಇಬ್ಬರು ತಾಯಿಂದಿರಿಗೆ ಗೌರವಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷಗಳಿಂದ ತಾಯಿಂದಿರ ದಿನ ಆಚರಿಸುತ್ತಿದ್ದೇವೆ’ ಎಂದು ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಹೇಳಿದರು.

ADVERTISEMENT

ಸಾಹಿತಿ ರೇಣುಕಾ ಸ್ವಾಮಿ ಉಪನ್ಯಾಸ ನೀಡಿ, ‘ತಾಯಿಯನ್ನು ಗೌರವಿಸುವ ಇಂತಹ ಕಾರ್ಯಕ್ರಮ ನಿಜಕ್ಕೂ ಮಾದರಿ. ತಂದೆ-ತಾಯಿಯೇ ನಿಜವಾದ ದೇವರು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರನ್ನು ಮರೆಯಬಾರದು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಎಂ. ಅಮರವಾಡಿ ಕಾರ್ಯಕ್ರಮ ಉದ್ಘಾಟಿಸಿ, ‘ಸಾಕಷ್ಟು ಕಡೆ ವೃದ್ಧ ತಂದೆ-ತಾಯಿಯನ್ನು ಕಡೆಗಣಿಸುವುದನ್ನು ನೋಡುತ್ತಿದ್ದೇವೆ. ಹಾಗೆ ಆಗಬಾರದು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಗೌರವ ಇದೆ. ಅದನ್ನು ಎಲ್ಲರೂ ಪಾಲಿಸಬೇಕು’ ಎಂದರು.

ಸಂಪನ್ಮೂಲ ಶಿಕ್ಷಕಿ ಗೀತಾ ವಿಜಯಕುಮಾರ ತಾಯಿ ಮಹತ್ವ ಸಾರುವ ಹಾಡು ಹಾಡಿ ಗಮನ ಸೆಳೆದರು. ನಸೀಮಾ ಬೇಗಂ, ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ ರತಿಕಾಂತ ನೇಳಗೆ, ಪತ್ರಕರ್ತ ಮನ್ಮಥಪ್ಪ ಸ್ವಾಮಿ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಡಾ. ಸಿದ್ದಾರೆಡ್ಡಿ, ಕಸ್ತೂರಿ ಸಿದ್ದಾರೆಡ್ಡಿ, ಕಸಾಪ ವಲಯ ಘಟಕದ ಚಂದ್ರಕಾಂತ ಫುಲೆ, ಅಂಬಾದಾಸ ನೇಳಗೆ, ಅಮರ ಸ್ವಾಮಿ, ಹಾವಗಿರಾವ ನೇಳಗೆ, ಓಂಕಾರ ಮೇತ್ರೆ, ಅಂಬಿಕಾ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಆರಾಧ್ಯ ಟ್ಯುಟೋರಿಯಲ್ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.