ADVERTISEMENT

ವಕೀಲನ ಕೊಲೆಗೆ ₹5 ಲಕ್ಷ ಸುಪಾರಿ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 5 ಮೇ 2024, 13:52 IST
Last Updated 5 ಮೇ 2024, 13:52 IST
<div class="paragraphs"><p>ಮೂವರು ಆರೋಪಿಗಳ ಬಂಧನ</p></div>

ಮೂವರು ಆರೋಪಿಗಳ ಬಂಧನ

   

ಬೀದರ್‌: ಐದು ಲಕ್ಷ ರೂಪಾಯಿಗೆ ಸುಪಾರಿ ಪಡೆದು, ವಕೀಲನ ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೀದರ್‌ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಒಂದು ವಾರದಲ್ಲಿ ಭೇದಿಸಿದ್ದಾರೆ.

‘ಮೂವರು ಆರೋಪಿಗಳನ್ನು ಭಾನುವಾರ (ಮೇ 5) ನೌಬಾದಿನ ಆಟೊ ನಗರ ಸಮೀಪ ಬಂಧಿಸಲಾಗಿದೆ. ಅವರಿಂದ ಕೆಎ 34, ಎನ್‌ 0103 ಸಂಖ್ಯೆಯ ಕಾರು, ಮಚ್ಚು, ಖಾರದ ಪುಡಿ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ವ್ಯಾಜ್ಯದಿಂದ ಕೂಡಿದ ಜಮೀನು ಖರೀದಿಸಿದ್ದರಿಂದ ವಕೀಲ ಕರ್ಸೆ ಅವರ ಮೇಲೆ ಕಾಶಪ್ಪ ದೇಶಮುಖ ಎಂಬಾತನಿಗೆ ಮನಃಸ್ತಾಪವಿತ್ತು. ಸ್ನೇಹಿತನೊಂದಿಗೆ ಸೇರಿಕೊಂಡು ವಕೀಲನ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ₹5 ಲಕ್ಷ ಸುಪಾರಿ ಕೊಟ್ಟು, ಮುಂಗಡವಾಗಿ ₹85 ಸಾವಿರ ನೀಡಿದ್ದ. ಬಂಧಿತ ಮೂವರ ಪೈಕಿ ದೀಕ್ಷಿತ್‌ ಅಲಿಯಾಸ್‌ ಗುಂಡು ವಿರುದ್ಧ ನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ಮತ್ತು ಶಿವಲಿಂಗಯ್ಯ ಸ್ವಾಮಿ ವಿರುದ್ಧ ತೆಲಂಗಾಣದ ಜಹೀರಾಬಾದಿನಲ್ಲಿ ಗಾಂಜಾ ಸಾಗಣೆ ಪ್ರಕರಣ ದಾಖಲಾಗಿದೆ’ ಎಂದು ವಿವರಿಸಿದರು.

‘ಏ. 28ರಂದು ನಗರದ ಕೆಎಚ್‌ಬಿ ಕಾಲೊನಿಯಲ್ಲಿ ವಕೀಲ ಬಾಬಶೆಟ್ಟಿ ಚಂದ್ರಪ್ಪ ಕರ್ಸೆ ಅವರ ಹತ್ಯೆಗೆ ಯತ್ನ ನಡೆದಿತ್ತು. ಅಂದು ಸಂಜೆ 7.30ರ ಸುಮಾರಿಗೆ ಇಂಡಿಕಾ ವಿಸ್ತಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಾಬಶೆಟ್ಟಿ ಅವರ ಮೇಲೆ ಖಾರದ ಪುಡಿ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ್ದರು. ಅವರ ಬಲಗೈ ಮತ್ತು ಮೂಗಿಗೆ ಗಾಯಗಳಾಗಿದ್ದವು. ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ಅವರ ಮೇಲೆ ಕಾರು ಹತ್ತಿಸಲು ವಿಫಲ ಯತ್ನ ನಡೆದಿತ್ತು. ಇದರಿಂದ ವಕೀಲರ ಬಲಗಾಲ ಹಿಮ್ಮಡಿಗೆ ಗಾಯಗಳಾಗಿದ್ದವು. ಕರ್ಸೆ ಅವರು ಕೊಟ್ಟ ದೂರಿನ ಮೇರೆಗೆ ನೂತನ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಮೂವರನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಹೇಳಿದರು.

ಡಿವೈಎಸ್ಪಿ ಶಿವನಗೌಡ ಪಾಟೀಲ, ನೂತನ ನಗರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂತೋಷ ಎಲ್‌.ಟಿ. ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ತಂಡದಲ್ಲಿ ನೂತನ ನಗರ ಠಾಣೆಯ ಸಿಬ್ಬಂದಿ ರಾಮಣ್ಣ, ಮಲ್ಲಿಕಾರ್ಜುನ, ನಿಂಗಪ್ಪ, ಧನರಾಜ, ಭರತ, ಗಾಂಧಿ ಗಂಜ್‌ ಠಾಣೆಯ ಅನಿಲ್‌, ನವೀನ್‌, ಇರ್ಫಾನ್‌, ಗಂಗಾಧರ, ಪ್ರವೀಣ, ಮಾರ್ಕೆಟ್‌ ಠಾಣೆಯ ಆರಿಫ್‌, ಮುತ್ತಣ್ಣ ಹಾಗೂ ಪ್ರೇಮ ಇದ್ದರು. ಪ್ರಕರಣ ಭೇದಿಸಿದ ತಂಡದ ಎಲ್ಲರಿಗೂ ಪ್ರಶಂಸಾ ಪತ್ರ ಹಾಗೂ ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.