ADVERTISEMENT

ಸಚಿನ್ ಆತ್ಮಹತ್ಯೆ: ಸಚಿವ ಈಶ್ವರ ಖಂಡ್ರೆ ₹10 ಲಕ್ಷ ಪರಿಹಾರ ಘೋಷಣೆ; ತನಿಖೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 10:02 IST
Last Updated 29 ಡಿಸೆಂಬರ್ 2024, 10:02 IST
<div class="paragraphs"><p>ಪೊಲೀಸರ ವಿರುದ್ಧ ಮೃತ ಯುವಕನ ಸಹೋದರಿಯರ ಆಕ್ರೋಶ; ಮನೆಯಿಂದ ಹೊರನಡೆದ ಪೊಲೀಸರು</p></div>

ಪೊಲೀಸರ ವಿರುದ್ಧ ಮೃತ ಯುವಕನ ಸಹೋದರಿಯರ ಆಕ್ರೋಶ; ಮನೆಯಿಂದ ಹೊರನಡೆದ ಪೊಲೀಸರು

   

ಕಟ್ಟಿ ತೂಗಾಂವ್ (ಬೀದರ್ ಜಿಲ್ಲೆ): ಗ್ರಾಮದ ಮೃತ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭೇಟಿ ನೀಡಿದಾಗ ಸಚಿನ್ ಅವರ ಸಹೋದರಿಯರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಚಿನ್ ಸಾವಿಗೂ ಮುನ್ನ ಆತನನ್ನು ಹುಡುಕಿಕೊಡುವಂತೆ ಠಾಣೆಗೆ ಹೋದಾಗ ಪೊಲೀಸರು ಸ್ಪಂದಿಸಲಿಲ್ಲ. ಅವರು ದೂರು ಸ್ವೀಕರಿಸಿ ಹುಡುಕಿದರೆ‌ ಆತ್ಮಹತ್ಯೆ ತಡೆಯಬಹುದಿತ್ತು. ಡೆತ್ ನೋಟ್ ನಲ್ಲಿದ್ದವರನ್ನು ಬಂಧಿಸದ ಪೊಲೀಸರು ಈಗೇಕೆ ಬಂದಿದ್ದಾರೆ. ಮೊದಲು ಅವರನ್ನು ಹೊರಗೆ ಕಳಿಸಿ ಎಂದು ಸಚಿವರ ಸಮ್ಮುಖದಲ್ಲೇ ಆಕ್ರೋಶ ಹೊರಹಾಕಿ ಪಟ್ಟು ಹಿಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮೆಗೌಡ ಸೇರಿದಂತೆ ಇತರೆ ಪೊಲೀಸರು ಮನೆಯಿಂದ ಹೊರಹೋದರು.

ADVERTISEMENT

ಬಳಿಕ ಈಶ್ವರ ಬಿ. ಖಂಡ್ರೆ ಅವರು ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ವೈಯಕ್ತಿಕ ಹಾಗೂ ಸರ್ಕಾರದಿಂದ ಜಂಟಿಯಾಗಿ ಹತ್ತು ಲಕ್ಷ ಪರಿಹಾರ ಕುಟುಂಬಕ್ಕೆ ನೀಡಲಾಗುವುದು. ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವುದರ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಕುಟುಂಬದವರು ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ಮನವಿ ಮಾಡುವೆ. ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಲಾಗುವುದು. ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ತನಿಖೆ ನಂತರ ಯಾರ ತಪ್ಪಿದೆಯೋ ಅವರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವಿಷಯದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ದುಃಖದಲ್ಲಿರುವ ಕುಟುಂದವರಿಗೆ ಸಾಂತ್ವನ, ಧೈರ್ಯದ ಅಗತ್ಯವಿದೆ. ನಮ್ಮ ಸರ್ಕಾರ ಅವರೊಂದಿಗೆ ಇದೆ. ನಾನು ಬೆಳಗಾವಿಯಲ್ಲಿದ್ದ ಕಾರಣ ಭೇಟಿ ಮಾಡಲು ಅಗಿರಲಿಲ್ಲ. ನಿನ್ನೆ ತಡರಾತ್ರಿ ಬಂದಿದ್ದೇನೆ ಎಂದರು.

ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರು ಡಿಸೆಂಬರ್ 26 ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿದಂತೆ ಎಂಟು ಜನರ ಹೆಸರುಗಳನ್ನು ಮರಣ ಪತ್ರದಲ್ಲಿ ಬರೆದಿದ್ದರು. ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಬಿಜೆಪಿಯ ಕಲಬುರಗಿ ಹಾಗೂ ಬೀದರ್ ನಿಯೋಗ ಸಚಿನ್ ಅವರ ಮನೆಗೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದವು. ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.