ADVERTISEMENT

ಔರಾದ್ | ಆಧಾರ್ ಕೇಂದ್ರ ಸ್ಥಗಿತ: 40 ಗ್ರಾಮಗಳ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಸಂತಪೂರ ಆಧಾರ್ ಕೇಂದ್ರ ಸ್ಥಗಿತಗೊಂಡ ಪರಿಣಾಮ ಔರಾದ್ ಆಧಾರ್ ಕೇಂದ್ರದಲ್ಲಿ ಒತ್ತಡ ಜಾಸ್ತಿಯಾಗಿ ಜನ ಸರತಿ ಸಾಲಿನಲ್ಲಿ ನಿಂತುಕೊಂಡಿರುವುದು
ಸಂತಪೂರ ಆಧಾರ್ ಕೇಂದ್ರ ಸ್ಥಗಿತಗೊಂಡ ಪರಿಣಾಮ ಔರಾದ್ ಆಧಾರ್ ಕೇಂದ್ರದಲ್ಲಿ ಒತ್ತಡ ಜಾಸ್ತಿಯಾಗಿ ಜನ ಸರತಿ ಸಾಲಿನಲ್ಲಿ ನಿಂತುಕೊಂಡಿರುವುದು   

ಔರಾದ್ (ಬೀದರ್‌ ಜಿಲ್ಲೆ): ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರ ಸಂತಪೂರದಲ್ಲಿ ಆಧಾರ್ ಕೇಂದ್ರ ಸ್ಥಗಿತವಾಗಿದ್ದು, 40 ಗ್ರಾಮಗಳ ಜನ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯ 30 ಹೋಬಳಿ ಪೈಕಿ 11 ಕಡೆ ಮಾತ್ರ ಆಧಾರ್ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಂತಪೂರ ಒಂದಾಗಿದೆ. ಸದ್ಯ, 40 ಗ್ರಾಮ ಹಾಗೂ 16 ತಂಡಾಗಳ ಜನ ಆಧಾರ್ ಸೌಲಭ್ಯಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಕ್ಕೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ.

‘ಲಿಂಗದಳ್ಳಿ (ಕೆ) ಗ್ರಾಮದಿಂದ 30 ಕಿ.ಮೀ ದೂರದಿಂದ ಔರಾದ್ ತಾಲ್ಲೂಕು ಕೇಂದ್ರಕ್ಕೆ ಆಧಾರ್ ಅಪಡೇಟ್‌ಗೆ ಬಂದಿದ್ದೇನೆ.  4 ಗಂಟೆ ಸಾಲಿನಲ್ಲಿ ನಿಲ್ಲಬೇಕಾಯಿತು. ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಕಿರಣ ಬಿರಾದಾರ.

ADVERTISEMENT

‘ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ನಾಲ್ಕು ಬಾರಿ ಔರಾದ್‌ಗೆ ಬಂದಿದ್ದೇನೆ.  ಬೇಗ ಕೆಲಸ ಆಗುತ್ತಿಲ್ಲ’ ಎಂದು ಲಿಂಗದಳ್ಳಿಯ ರೈತ ರಮೇಶ ಕಾಶಿನಾಥ ಗೋಳು ತೋಡಿಕೊಂಡಿದ್ದಾರೆ.

‘ಇಷ್ಟು ದೊಡ್ಡ ಹೋಬಳಿ ಕೇಂದ್ರದಲ್ಲಿನ ಆಧಾರ್ ಕೇಂದ್ರ ಸ್ಥಗಿತ ಮಾಡಿರುವುದು ಜನರಿಗೆ ಸಮಸ್ಯೆಯಾಗಿದೆ. ಕೂಡಲೇ ಅದನ್ನು ಮತ್ತೆ ಆರಂಭಿಸಬೆಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಎಚ್ಚರಿಕೆ ನೀಡಿದರು.

ಔರಾದ್ ತಾಲ್ಲೂಕಿನ 3 ಆಧಾರ್ ಕೇಂದ್ರಗಳ ಪೈಕಿ ಸಂತಪೂರ ಕೇಂದ್ರ ಸ್ಥಗಿತವಾಗಿದೆ. ಜನರಿಗೆ ಸಮಸ್ಯೆಯಾಗುತ್ತಿರುವ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ
ಮಹೇಶ ಪಾಟೀಲ ತಹಶೀಲ್ದಾರ್ ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.