ADVERTISEMENT

ಸಂತಪೂರ: ‘ನನ್ನ ಶಾಲೆ, ನನ್ನ ಸೇವೆ’ ಅಭಿಯಾನ

ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು, ಹಿತೈಷಿಗಳಿಂದ ನೆರವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:47 IST
Last Updated 16 ಜುಲೈ 2025, 5:47 IST
ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲೆಯ ಹಿತೈಷಿಗಳು ನಗದು ಬಹುಮಾನ ನೀಡಿದರು
ಔರಾದ್ ತಾಲ್ಲೂಕಿನ ಸಂತಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲೆಯ ಹಿತೈಷಿಗಳು ನಗದು ಬಹುಮಾನ ನೀಡಿದರು   

ಔರಾದ್: ತಾವು ಕಲಿತ ಶಾಲೆ ಉಳಿಯಬೇಕು ಎಂಬ ಅಭಿಮಾನದಿಂದ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಶಾಲೆಯ ಬಡ ಮಕ್ಕಳ ನೆರವಿಗೆ ಮುಂದಾಗಿದ್ದಾರೆ.

6 ದಶಕದಷ್ಟು ಹಳೆಯದಾದ ಇಲ್ಲಿಯ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಂದಿಗೂ ಮಾದರಿಯಾಗಿ ಉಳಿದಿದ್ದು ಹೆಮ್ಮೆಯ ವಿಷಯವಾಗಿದೆ. ವಜ್ರ ಮಹೋತ್ಸವ ಆಚರಣೆಯ ಸಿದ್ಧತೆಯಲ್ಲಿರುವ ಶಾಲೆಯ ಹಿತೈಷಿಗಳು ಇಲ್ಲಿನ ವಿದ್ಯಾರ್ಥಿಗಳಿಗಾಗಿ ‘ನನ್ನ ಶಾಲೆ, ನನ್ನ ಸೇವೆ’ ಎಂಬ ಅಭಿಯಾನ ನಡೆಸಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ADVERTISEMENT

ಈ ಶಾಲೆಯ ಹಳೆ ವಿದ್ಯಾರ್ಥಿ ಜುಂಜೇರಾವ್ ನಾಯಕ ₹5 ಸಾವಿರ, ಮುಖ್ಯಶಿಕ್ಷಕ ಅಜಯಕುಮಾರ ದುಬೆ ಅವರು ₹5 ಸಾವಿರ, ಎಸ್‌ಡಿಎಂಸಿ ಅಧ್ಯಕ್ಷರು ₹5 ಸಾವಿರ, 2011ನೇ ಸಾಲಿನ ಹಳೆ ವಿದ್ಯಾರ್ಥಿಗಳು ₹5 ಸಾವಿರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ₹5 ಸಾವಿರ, ಶಾಲೆಯ ಪ್ರತಿಯೊಬ್ಬ ಶಿಕ್ಷಕರು ತಮ್ಮ ತಮ್ಮ ವಿಷಯದಲ್ಲಿ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ₹2 ಸಾವಿರ ನಗದು ಬಹುಮಾನ ನೀಡುತ್ತಾರೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ₹2 ಸಾವಿರ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗೆ ₹2 ಸಾವಿರ, ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗೆ ₹2 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

‘ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಯಾ ದಾನಿಗಳು ಖುದ್ದಾಗಿ ಬಂದು ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ರೂಢಿ ನಮ್ಮ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ’ ಎಂದು ಹೇಳುತ್ತಾರೆ ಮುಖ್ಯ ಶಿಕ್ಷಕ ಅಜಯಕುಮಾರ ದುಬೆ.

ನಮ್ಮದು ಸರ್ಕಾರಿ ಶಾಲೆ ಇದ್ದರೂ ಯಾವುದಕ್ಕೂ ಕೊರತೆ ಇಲ್ಲ. 8ರಿಂದ 10ನೇ ತರಗತಿವರೆಗೆ 217 ವಿದ್ಯಾರ್ಥಿಗಳಿದ್ದಾರೆ. 14 ಜನ ಶಿಕ್ಷಕರಿದ್ದಾರೆ. ಉತ್ತಮ ಕಟ್ಟಡ ಇದೆ. ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಸಹಕಾರದಿಂದ ಸುಂದರ ಕೈತೋಟ ಮಾಡಿದ್ದೇವೆ. ನಮ್ಮ ಮಕ್ಕಳು ಆಟ, ಪಾಠದಲ್ಲೂ ಮುಂದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ 9 ವಿದ್ಯಾರ್ಥಿಗಳು ಅಗ್ರಶ್ರೇಣಿ, ಉಳಿದ 71 ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಶಿಕ್ಷಕ ಶಿವಲಿಂಗ ಹೇಡೆ ತಮ್ಮ ವಿದ್ಯಾರ್ಥಿಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ನಮ್ಮದು ಸರ್ಕಾರಿ ಶಾಲೆ ಆಗಿದ್ದರೂ ಗುಣಮಟ್ಟದ ಶಿಕ್ಷಣ ಅಗತ್ಯ ಮೂಲಸೌಕರ್ಯ ಹೊಂದಿದೆ. ಶಿಕ್ಷಕರ ವಿಶೇಷ ಕಾಳಜಿಯಿಂದ ಮಾದರಿ ಶಾಲೆ ಎನಿಸಿಕೊಂಡಿದೆ
- ಅಜಯಕುಮಾರ ದುಬೆ, ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.