
ಹುಮನಾಬಾದ್: ‘ಕನಕದಾಸರ 538ನೇ ಜಯಂತಿ ಉತ್ಸವ ಸಮಿತಿಗೆ ಸತೀಶ್ ರಾಂಪೂರೆ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದಾರೆ’ ಎಂದು ಗೊಂಡ ಸಮಾಜದ ಮುಖಂಡ ಶಿವರಾಜ್ ಚೀನಕೇರಿ ಆರೋಪಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಹುಮನಾಬಾದ್ ಪಟ್ಟಣದ ಹೊರವಲಯದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಮಾಜದ ಎಲ್ಲಾ ಮುಖಂಡರು ಸೇರಿ ಈ ಜಯಂತಿ ಉತ್ಸವ ಸಮಿತಿಗೆ ಅಧ್ಯಕ್ಷರನ್ನಾಗಿ ಬಸವರಾಜ ಮೋಳಕೇರಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸತೀಶ್ ರಾಂಪೂರೆ ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದರು. ಆದರೆ ಈಗ ಸತೀಶ್ ರಾಂಪೂರೆ ಅವರು ಸಮಾಜದ ಮುಖಂಡರ ಅಭಿಪ್ರಾಯ ಇಲ್ಲದೆ ಏಕಾಏಕಿ ಜಯಂತಿ ಉತ್ಸವ ಸಮಿತಿಗೆ ಅಧ್ಯಕ್ಷರಾಗಿ ಘೋಷಿಸಿಕೊಂಡಿರುವುದು ಖಂಡನೀಯ’ ಎಂದರು.
‘ಜಯಂತಿ ಉತ್ಸವ ಸಮಿತಿ ಇನ್ನೂ ಪೂರ್ಣವಾಗಿಲ್ಲ. ಆದರೆ ಇವರು ಅಧ್ಯಕ್ಷರೆಂದು ಹೇಳಿಕೊಂಡು ಕಾಂಗ್ರೆಸ್ ಮುಖಂಡರ ಮನೆಗೆ ಹೋಗಿ ಸನ್ಮಾನಿಸಿ, ಸನ್ಮಾನ ಮಾಡಿಕೊಂಡಿರುವುದು ಸರಿಯಲ್ಲ’ ಎಂದರು.
‘ಕನಕದಾಸರ ಜಯಂತಿ ಕೇವಲ ಒಂದು ಪಕ್ಷಕ್ಕೆ ಸೀಮಿತ ಮಾಡುವುದಕ್ಕೆ ಸತೀಶ್ ರಾಂಪೂರೆ ಮುಂದಾಗಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಸಮಾಜದ ಒಗ್ಗಟ್ಟು ಮತ್ತು ಹಿತದೃಷ್ಟಿಯಿಂದ ಎಲ್ಲರ ಅಭಿಪ್ರಾಯ ಪಡೆದು ಹುಮನಾಬಾದ್ ಪಟ್ಟಣದಲ್ಲಿ ಬೃಹತ್ ಪ್ರಮಾಣದಲ್ಲಿ ಒಂದೇ ಜಯಂತಿ ಆಚರಣೆ ಮಾಡಲಾಗುವುದು’ ಎಂದು ತಿಳಿಸಿದರು.
ದೇವದತ್ತ ಒಡಯರ್, ವಿನಾಯಕ್ ಹಂದಿಕೇರಾ, ಮಾಣಿಕ್ ನಿಮಾನೆ, ಪವನ್ ಗೊಂಡ, ಪಂಡೀತ್ ಹಿಪ್ಪರಗಿ, ಖಂಡಪ್ಪ ವಡ್ಡನಕೇರಾ, ಆನಂದ, ಶೇಶಪ್ಪ, ರಾಜೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.