ADVERTISEMENT

ಪ್ರಜಾವಾಣಿ ಕ್ಯಾಲೆಂಡರ್ ಬಿಡುಗಡೆ: ಫುಲೆ ದಿಟ್ಟತನ ಮಾದರಿ- ಗುರುಬಸವ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 7:12 IST
Last Updated 21 ಜನವರಿ 2025, 7:12 IST
<div class="paragraphs"><p>ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಪ್ರಜಾವಾಣಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. </p></div>

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಪ್ರಜಾವಾಣಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

   

ಭಾಲ್ಕಿ: ‘ಸಾವಿತ್ರಿಬಾಯಿ ಫುಲೆ ಅವರು ತಮ್ಮ ಜೀವನದುದ್ದಕ್ಕೂ ದೌರ್ಜನ್ಯ, ನಿಂದನೆಯನ್ನು ದಿಟ್ಟತನದಿಂದ ಎದುರಿಸಿ ಸಮಾಜದಲ್ಲಿ ನೊಂದವರ ಪರ ಧ್ವನಿಯೆತ್ತಿದ್ದರು’ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಭಾನುವಾರ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ, ‘ಪ್ರಜಾವಾಣಿ’ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ADVERTISEMENT

‘ಬುದ್ಧ, ಬಸವಣ್ಣನವರ ವಿಚಾರಧಾರೆಯನ್ನು ಸಾವಿತ್ರಿಬಾಯಿ ಫುಲೆ ಅವರು ತಮ್ಮ ಜೀವನದಲ್ಲಿ ಅನುಸರಿಸಿದರು. ಸಮಾಜದಲ್ಲಿನ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಶ್ರಮಿಸಿದ್ದ ಫುಲೆ ಅವರ ಚಿಂತನೆ, ಆದರ್ಶಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಪರಿಶಿಷ್ಟ ಜಾತಿ, ಪಂಗಡ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಾಗರ ವೈಜಿನಾಥ ಮಾತನಾಡಿ,‘ಭಾರತದ ಪ್ರಪ್ರಥಮ ಶಿಕ್ಷಕಿ ಎನ್ನುವ ಹೆಗ್ಗಳಿಕೆ ಹೊಂದಿರುವ ಸಾವಿತ್ರಿಬಾಯಿ ಫುಲೆ ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿದ್ದಾರೆ’ ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸಾರಿಕಾ ಗಂಗಾ ಮಾತನಾಡಿ,‘ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣದ ಜ್ಯೋತಿ ಹೊತ್ತಿಸಿದರು. ಮಹಿಳೆಯರಿಗಾಗಿ ಪ್ರತ್ಯೇಕ ಶಾಲೆ ತೆರೆದು ಶಿಕ್ಷಣದ ಮಹತ್ವ ಸಾರಿದ್ದರು’ ಎಂದು ತಿಳಿಸಿದರು.

ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ,‘ಹತ್ಯೆಗೆ ಬಂದ ಹಂತಕರ ಮನಃಪರಿವರ್ತನೆ ಮಾಡಿದ ಶ್ರೇಯಸ್ಸು ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಅವರ ಸಾಧನೆ, ಸಾಹಸಕ್ಕೆ ಅಂದಿನ ಬ್ರಿಟಿಷ ಸರ್ಕಾರ ಪುರಸ್ಕಾರ ನೀಡಿ ಗೌರವಿಸಿದೆ. ಪುಣೆಯಲ್ಲಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಕೀರ್ತಿಲತಾ ಹೊಸಾಳೆ, ತಾಲ್ಲೂಕು ಎಸ್‍ಸಿ, ಎಸ್‍ಟಿ ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಸರಿತಾಕುಮಾರಿ ಗಾಯಕವಾಡ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಲಕ್ಷ್ಮಣ ಮೇತ್ರೆ ಹಾಗೂ ಸಿದ್ರಾಮ ಗೊಗ್ಗಾ ಇದ್ದರು.

Cut-off box - ಮಹೇಶ್ವರಿ ಸ್ವಾಮಿಗೆ ಫುಲೆ ಪ್ರಶಸ್ತಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಸ್ಥಾಪಿಸಲಾದ ಚೊಚ್ಚಲ ‘ಸಾವಿತ್ರಿಬಾಯಿ ಫುಲೆ ಶಿಕ್ಷಣ ಸೇವಾ ಪ್ರಶಸ್ತಿ’ಯನ್ನು ಕಲಬುರಗಿಯ ರಾಜೀವ್‌ ಗಾಂಧಿ ಸ್ಮಾರಕ ಪ್ರೌಢಶಾಲೆ ಶಿಕ್ಷಕಿ ಮಹೇಶ್ವರಿ ಷಣ್ಮುಖಯ್ಯ ಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ₹11 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆ ಕಾರ್ಯಕ್ರಮದ ನಂತರ ಸಿರಿಗೆರಿಯ ಧಾತ್ರಿ ರಂಗ ಸಂಸ್ಥೆ ಪ್ರದರ್ಶಿಸಿದ ಸಾವಿತ್ರಿಬಾಯಿ ಫುಲೆಯವರ ‘ಅಕ್ಷರಯಾನ ಸರಸತಿಯಾಗಲೊಲ್ಲೆ’ ನಾಟಕ ವಿದ್ಯಾರ್ಥಿಗಳ ಗಮನ ಸೆಳೆಯಿತು. ಇದನ್ನು ನವೀನ್ ಭೂಮಿ ನಿರ್ದೇಶಿಸಿದ್ದು ಡಾ.ಎಂ.ಭೈರೇಗೌಡ ಉಮೇಶ ಪತ್ತಾರ ರಚಿಸಿದ್ದಾರೆ. ಶುಭಕರ ಪುತ್ತೂರು ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.