ADVERTISEMENT

ಬೀದರ್‌ | ಅನುದಾನ ಮಂಜೂರಾದರೂ ಶುರುವಾಗದ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಡಿಸೆಂಬರ್ 2025, 7:31 IST
Last Updated 5 ಡಿಸೆಂಬರ್ 2025, 7:31 IST
ಶಿಥಿಲಗೊಂಡಿರುವ ಬೀದರ್‌ನ ರಾವ್‌ ತಾಲೀಮ್‌ನಲ್ಲಿರುವ ಹಳೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ಕಟ್ಟಡ
ಶಿಥಿಲಗೊಂಡಿರುವ ಬೀದರ್‌ನ ರಾವ್‌ ತಾಲೀಮ್‌ನಲ್ಲಿರುವ ಹಳೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ ಕಟ್ಟಡ   

ಬೀದರ್‌: ನಗರದ ರಾವ್‌ ತಾಲೀಮ್‌ನಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಮಂಜೂರಾದರೂ ಇದುವರೆಗೆ ಅದರ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ.

ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ₹6 ಕೋಟಿ ಬಿಡುಗಡೆಗೊಳಿಸಿದೆ. ಆದರೆ, ಇನ್ನೂ ಹಳೆಯ ಕಟ್ಟಡದ ತೆರವು ಕೆಲಸವೇ ಶುರುವಾಗಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

8ರಿಂದ 10ನೇ ತರಗತಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಕನ್ನಡ ಹಾಗೂ ಉರ್ದು ಭಾಷೆ ಮಾಧ್ಯಮಗಳನ್ನು ನಡೆಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ 34 ವಿದ್ಯಾರ್ಥಿನಿಯರು, ಏಳು ಜನ ಬೋಧಕ ಸಿಬ್ಬಂದಿ ಇದ್ದಾರೆ. ಉರ್ದುವಿನಲ್ಲಿ 87 ವಿದ್ಯಾರ್ಥಿಗಳು, ಆರು ಜನ ಶಿಕ್ಷಕರಿದ್ದಾರೆ. ಹಳೆಯ ಕಟ್ಟಡದಲ್ಲಿ ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಒಟ್ಟಿಗೆ ನಡೆಸಲಾಗುತ್ತಿತ್ತು. ಈಗಾಗಲೇ ಪಿಯು ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಅಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಪ್ರೌಢಶಾಲೆ ಕಟ್ಟಡದ ನಿರ್ಮಾಣ ನನೆಗುದಿಗೆ ಬಿದ್ದ ಕಾರಣ ಹಳೆ ಕಟ್ಟಡ ಎದುರಿನ ಇನ್ನೊಂದು ಕಟ್ಟಡದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಅಲ್ಲಿ ಕಲಿಕೆಗೆ ಸೂಕ್ತ ವಾತಾವರಣ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ. ಸ್ಥಳ ಇಕ್ಕಟ್ಟಾಗಿದೆ. ಕೆಲವೊಮ್ಮೆ ತರಗತಿಗಳನ್ನು ಕಟ್ಟಡದ ನಡುವೆ ಕಚೇರಿಗೆ ಹೋಗಿ ಬರುವ ಜಾಗದಲ್ಲಿ ನಡೆಸಲಾಗುತ್ತಿದೆ. ಪ್ರಶಾಂತ ವಾತಾವರಣದಲ್ಲಿ ಕಲಿಕೆಗೆ ಬೇಕಿರುವ ಕನಿಷ್ಠ ಸೌಕರ್ಯಗಳಿಲ್ಲ. ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಯ ಕಚೇರಿ ಕೂಡ ಹಳೆಯ ‘ಚೀತಾ ಖಾನಾ’ದ ಮೇಲ್ಭಾಗದಲ್ಲಿ ನಡೆಸಲಾಗುತ್ತಿದೆ. ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಹೊಸಬರು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಹಳೆಯ ಕಟ್ಟಡ ತೆರವುಗೊಳಿಸಿದ ನಂತರ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಜಗದೇವಿ ಭೋಸ್ಲೆ ಪ್ರಾಂಶುಪಾಲರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ
ವಿಳಂಬವೇಕೆ?
ಹಿಂದಿನ ಸಾಲಿನಲ್ಲೇ ಕೆಕೆಆರ್‌ಡಿಬಿಯಿಂದ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಹಳೆಯ ಕಟ್ಟಡದ ತೆರವು ಕಾರ್ಯ ನಡೆಯಬೇಕಾಗಿದೆ. ಹಳೆಯ ಕಟ್ಟಡದಲ್ಲಿ ಸಾಗುವಾನಿ ಮರದ ಬೃಹತ್‌ ಕಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಅವುಗಳು ಬೆಲೆಬಾಳುವಂತಹವು. ತೆರವಿನ ವೇಳೆ ಅವುಗಳಿಗೆ ಹಾನಿಯಾಗದಂತೆ ತೆಗೆಯಬೇಕಿದೆ. ಇದಕ್ಕಾಗಿ ಇನ್ನಷ್ಟೇ ಟೆಂಡರ್‌ ಕರೆಯಬೇಕಿದೆ. ಟೆಂಡರ್‌ ಕರೆಯದ ಕಾರಣ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವಿಳಂಬವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.