
ಔರಾದ್: ‘ಶಾಲೆಗೆ ಬಂದ ಮಗುವಿಗೆ ಏನಾದರೂ ಹೆಚ್ಚುಕಮ್ಮಿ ಆದರೆ ಸಂಬಂಧಿತ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಅರ್ಜುನ ಬನಸೋಡೆ ಎಚ್ಚರಿಸಿದರು.
ತಾಲ್ಲೂಕಿನ ಜಮಾಲಪೂರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು. ಶಾಲೆಯಲ್ಲಿ ಸಂಗ್ರಹಿಸಿದ ಆಹಾರ ಧಾನ್ಯ, ಅಡುಗೆ ಕೋಣೆ, ಶಾಲೆ ಇಡೀ ಪರಿಸರ ವೀಕ್ಷಣೆ ಮಾಡಿದರು. ಮಧ್ಯಾಹ್ನ ತಯಾರಿಸಿದ ಬಿಸಿಯೂಟ ಪರಿಶೀಲಿಸಿ ಮಕ್ಕಳ ಜತೆ ತಾವೂ ಊಟ ಮಾಡಿದರು.
ಇನ್ನು ಮುಂದೆ ನಿತ್ಯ ಶಿಕ್ಷಕರು ಊಟ ಮಾಡಿದ ನಂತರವೇ ಮಕ್ಕಳಿಗೆ ಬಡಿಸಬೇಕು. ಮೊನ್ನೆ ಮಕ್ಕಳು ಅಸ್ವಸ್ಥಗೊಂಡಿರುವುದು ಗಂಭೀರ ವಿಷಯ. ಈ ರೀತಿಯ ಬೇಜವಾಬ್ದಾರಿ ಸರಿಯಲ್ಲ ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ಈ ರೀತಿಯ ಘಟನೆ ಮರುಕಳಿಸದಂತೆ ಎಲ್ಲ ಶಾಲೆಗಳಿಗೆ ಮೇಲ್ವಿಚಾರಣೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ ಅವರಿಗೆ ಸೂಚಿಸಿದರು. ನ್ಯಾಯಾಧೀಶ ಹಾಜಿ ಹುಸೇನಸಾಬ್ ಯಾದವಾಡ್, ಪಾಲಕರು ಇದ್ದರು.
ಹೆಚ್ಚುವರಿ ಆಯುಕ್ತರ ಭೇಟಿ: ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಪಿ.ರಾಹುಲ್ ಬುಧವಾರ ಜಮಾಲಪೂರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳ ಅಸ್ವಸ್ಥ ಘಟನೆ ಕುರಿತು ಶಿಕ್ಷಕರು ಹಾಗೂ ಪಾಲಕರಿಂದ ಮಾಹಿತಿ ಪಡೆದರು. ಮಕ್ಕಳ ಜತೆ ಬಿಸಿಯೂಟ ಸೇವಿಸಿ ಮಕ್ಕಳ ಆರೋಗ್ಯ ವಿಷಯದಲ್ಲಿ ಶಿಕ್ಷಕರು ಕಾಳಜಿ ವಹಿಸುವಂತೆ ತಿಳಿಸಿದರು. ನ್ಯಾಯಾಧೀಶ ಮಹಾಜಿ ಹುಸೇನಸಾಬ್ ಹಾಗೂ ವಿನಾಯಕ ವಾನಖಂಡೆ ಇದ್ದರು.
ಅಮಾನತು ಖಂಡಿಸಿ ಪ್ರತಿಭಟನೆ: ಜಮಾಲಪೂರ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ನಜೀರ್ ಅಹ್ಮದ್ ಅವರ ಅಮಾನತು ಖಂಡಿಸಿ ಅಲ್ಲಿಯ ವಿದ್ಯಾರ್ಥಿಗಳು ಕೆಲ ಕಾಲ ಪ್ರತಿಭಟನೆ ನಡೆಸಿದರು.
ಶಿಕ್ಷಕ ನಜೀರ್ ಅಹ್ಮದ್ ಅವರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಅವರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬ ಬೇಡಿಕೆ ಮಂಡಿಸಿದರು.
ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ್ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಮುಖ್ಯಶಿಕ್ಷಕ, ಸಿಆರ್‌ಸಿ, ಅಡುಗೆ ಸಿಬ್ಬಂದಿ ಅಮಾನತು ಮಾಡಿದ್ದಾರೆ. ತನಿಖೆ ನಡೆಯುತ್ತಿದೆ. ಅವರು ತಪ್ಪು ಮಾಡಿಲ್ಲ ಎಂದಾದರೆ ಸರ್ಕಾರ ಅವರ ಅಮಾನತು ಆದೇಶ ವಾಪಸ್ ಪಡೆಯುತ್ತದೆ ಎಂದು ಸಮಾಧಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.