ADVERTISEMENT

ಅರುಣೋದಯ ಶಾಲೆಯಲ್ಲಿ ತಂದೆ-ತಾಯಿ ಪೂಜೆ ದಿನಾಚರಣೆ: ಪಾಲಕರ ಪಾದ ಪೂಜೆ ಮಾಡಿದ ಮಕ್ಕಳು

ಅರುಣೋದಯ ಶಾಲೆಯಲ್ಲಿ ತಂದೆ-ತಾಯಿ ಪೂಜೆ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 13:26 IST
Last Updated 14 ಫೆಬ್ರುವರಿ 2023, 13:26 IST
ಬೀದರ್‌ನ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಂದೆ-ತಾಯಿ ಪೂಜೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ತಂದೆ-ತಾಯಿ ಹಾಗೂ ಗುರುಗಳ ಪಾದ ಪೂಜೆ ಮಾಡಿದರು
ಬೀದರ್‌ನ ಅರುಣೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಂದೆ-ತಾಯಿ ಪೂಜೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ತಂದೆ-ತಾಯಿ ಹಾಗೂ ಗುರುಗಳ ಪಾದ ಪೂಜೆ ಮಾಡಿದರು   

ಬೀದರ್: ಇಲ್ಲಿಯ ಅರುಣೋದಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಂದೆ-ತಾಯಿ ಪೂಜೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಪಾಲಕರ ಹಾಗೂ ಗುರುಗಳ ಪಾದ ಪೂಜೆ ಮಾಡಿದರು.

ತಂದೆ- ತಾಯಿ, ಗುರುಗಳ ಪಾದಕ್ಕೆ ಪೂಜೆ ಸಲ್ಲಿಸಿ, ಆರತಿ ಬೆಳಗಿ, ನಮಸ್ಕರಿಸಿ ಭಕ್ತಿ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗ ವೇದಾಂತ ಸೇವಾ ಸಂಸ್ಥೆಯ ಕಾರ್ಯದರ್ಶಿ ಡಾ. ಸುರೇಂದ್ರ ರೂಡೆ ಅವರು, ಪ್ರತಿ ವರ್ಷ ಫೆ. 14 ರಂದು ತಂದೆ-ತಾಯಿ ಪೂಜೆ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು. ಮಕ್ಕಳು ನಿತ್ಯ ಪಾಲಕರ ಪೂಜೆ ಮಾಡಬೇಕು. ಅವರ ಆಜ್ಞೆ ಪಾಲಿಸಬೇಕು. ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಋಷಿಕೇಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ ಮಂಗಳೂರೆ ಮಾತನಾಡಿ, ತಂದೆ-ತಾಯಿ ಮಕ್ಕಳನ್ನು ಸಲಹುತ್ತಾರೆ. ಉತ್ತಮ ಸಂಸ್ಕಾರ ನೀಡುತ್ತಾರೆ. ಅವರಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ ಎಂದು ತಿಳಿಸಿದರು.

ಮಕ್ಕಳು ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಮೂಲಕ ಅವರ ಋಣ ತೀರಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು ಎಂದು ಹೇಳಿದರು.

ಯೋಗ ವೇದಾಂತ ಸೇವಾ ಸಂಸ್ಥೆಯ ಅಧ್ಯಕ್ಷ ಸಂಜು ಪಾಟೀಲ, ಅರುಣೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಈಶ್ವರಿ ಬೇಲೂರೆ ಉಪಸ್ಥಿತರಿದ್ದರು.

ಶಿಕ್ಷಕಿ ಸಾರಿಕಾ ಬಿರಾದಾರ ನಿರೂಪಿಸಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಸವರಾಜ ಮುಗುಟಾಪುರೆ ವಂದಿಸಿದರು.
ಅರುಣೋದಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಯೋಗ ವೇದಾಂತ ಸೇವಾ ಸಮಿತಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.