ADVERTISEMENT

ಬಂಗಾರದ ಅಂಗಡಿಗಳಿಗೆ ಸೀಲ್

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ವ್ಯವಹಾರ; ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 14 ಮೇ 2021, 7:21 IST
Last Updated 14 ಮೇ 2021, 7:21 IST
ಬಸವಕಲ್ಯಾಣದ ಸದಾನಂದ ಗೋಲ್ಡ್ ಮಾರ್ಕೇಟ್‌ನಲ್ಲಿನ ಬಂಗಾರ ಆಭರಣ ಮಾರಾಟದ ಅಂಗಡಿಗಳನ್ನು ಪೊಲೀಸರು ಗುರುವಾರ ಸೀಲ್ ಮಾಡಿದರು
ಬಸವಕಲ್ಯಾಣದ ಸದಾನಂದ ಗೋಲ್ಡ್ ಮಾರ್ಕೇಟ್‌ನಲ್ಲಿನ ಬಂಗಾರ ಆಭರಣ ಮಾರಾಟದ ಅಂಗಡಿಗಳನ್ನು ಪೊಲೀಸರು ಗುರುವಾರ ಸೀಲ್ ಮಾಡಿದರು   

ಬಸವಕಲ್ಯಾಣ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ನಗರದ ಸದಾನಂದ ಗೋಲ್ಡ್ ಮಾರ್ಕೇಟ್‌ನಲ್ಲಿನ 8 ಅಂಗಡಿಗಳನ್ನು ಗುರುವಾರ ಪೊಲೀಸರು ಸೀಲ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಅಂಗಡಿಗಳನ್ನು ತೆರೆದಿಟ್ಟು ವ್ಯವಹಾರ ನಡೆಸುತ್ತಿದ್ದ ಆರೋಪದ ಮೇರೆಗೆ ಅಂಗಡಿಗಳನ್ನು ಸೀಲ್ ಮಾಡಲಾಗಿದೆ. ಸಿಪಿಐ ಜೆ.ಎಚ್.ನ್ಯಾಮಗೌಡ, ಸಬ್ ಇನ್‌ಸ್ಪೆಕ್ಟರ್ ಗುರು ಪಾಟೀಲ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಬಂದ್: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮೇ 10ರಿಂದ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿ ಲಾಕ್‌ಡೌನ್ ಮಾಡಿರುವ ಕಾರಣ ಮೂರನೇ ದಿನವೂ ನಗರದಲ್ಲಿನ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿರಲಿಲ್ಲ.

ADVERTISEMENT

ವಾಹನ ಸಂಚಾರ ಇಲ್ಲದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ ತರಕಾರಿ ಹಾಗೂ ಕಿರಾಣಾ ಅಂಗಡಿಗಳು ತೆರೆದಿಡಲು ಅವಕಾಶ ನೀಡಿರುವ ಕಾರಣ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಕಾವಲು ಹಾಕಲಾಗಿತ್ತು. ಅಂಬೇಡ್ಕರ್ ವೃತ್ತ ಹಾಗೂ ಇತರೆಡೆ ಕೋವಿಡ್ ತಪಾಸಣಾ ಕೇಂದ್ರಗಳನ್ನೂ ಆರಂಭಿಸಲಾಗಿದ್ದು, ಕೆಲವರು ತಪಾಸಣೆ ಮಾಡಿಸಿಕೊಂಡರು.

ನಾಲ್ಕು ಅಂಗಡಿಗಳ ವಿರುದ್ಧ ಪ್ರಕರಣ

ಚಿಟಗುಪ್ಪ: ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿ ವಹಿವಾಟು ನಡೆಸುತ್ತಿರುವ ಇಲ್ಲಿಯ ಮುಖ್ಯ ಮಾರುಕಟ್ಟೆಯಲ್ಲಿ ನಾಲ್ಕು ಅಂಗಡಿಗಳ ಮೇಲೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ಲುಂಬಿ ಪುರಸಭೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎರಡು ಬಟ್ಟೆ ಅಂಗಡಿಗಳ ಮಾಲೀಕರಾದ ಫಕ್ರುದ್ದಿನ್‌ ಮೈನೋದ್ದೀನ್‌ ಪಟೇಲ್‌, ಶೇಕ್‌ ಉಮರ್‌ ಶೇಕ್‌ ಹುಸೇನ್‌, ಎರಡು ಸರಾಫ್‌ ಅಂಗಡಿಗಳ ಮಾಲೀಕರಾದ ಸಿದ್ರಾಮಪ್ಪ ಅಪ್ಪಣ್ಣ ಶೀಲವಂತ್, ಚಂದ್ರಕಾಂತ್‌ ಗೋಪಾಲರಾವ್‌ ಅವರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.